ಪುಟ:Mahakhshatriya.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗೋವಿನಿಂದ ವಿಕ್ರಯಿಸುವರು” ಎಂದನು. ಅರಸನು ಅದನ್ನು ಅನುಮೋದಿಸಿ ಬಂದು “ಎಷ್ಟು ಹಸುಗಳನ್ನು ಕೊಡಲಿ ?” ಎಂದನು. ಚ್ಯವನನು ಅದನ್ನು ಅಂಗೀಕರಿಸಿ “ಅವರು ಕೇಳಿದಷ್ಟು” ಎಂದನು.

ಬೆಸ್ತರು ಅರಸನಿಗೆ ಕೈಮುಗಿದು ಹೇಳಿಕೊಂಡರು : “ಬುದ್ಧೀ, ತಪಸ್ಸು ಕೆಡಿಸಿದೋ ಅಂಥ ಇವಪ್ಪ ಸಾಪ ಕೊಡಲಿಲ್ಲವಲ್ಲ ಅದೇ, ನಮ್ಮ ಅದೃಷ್ಟ, ಇನ್ನು ನಮಗೆ ಬೆಲೆ ಕೊಡೋದಾ ? ಇವಪ್ಪ ಏನು ಮೀನು ಕೆಟ್ಟೋದನಾ ? ನಮಗೇನೂ ಬೇಡ ಬುದ್ಧಿ ನಿಮ್ಮ ಪಾದ.”

ಬ್ರಾಹ್ಮಣನು ಕೇಳಲಿಲ್ಲ : “ಬಹು ದಿನಗಳಿಂದ ಈ ಮೀನುಗಳ ಜೊತೆಯಲ್ಲಿದ್ದು ನಾನೂ ಮೀನೇ ಆಗಿಹೋಗಿದ್ದೇನೆ. ಇದೋ ಇಲ್ಲಿ ಬಿದ್ದಿರುವವರೆಲ್ಲಾ ನಿಮ್ಮ ಬಾಂಧವರೇ ! ನಾನೂ ಅವರ ಹಾಗೆಯೇ ! ಅವರು ಸತ್ತಿದ್ದಾರೆ. ನಾನು ಬದುಕಿದ್ದೇನೆ. ಅಷ್ಟೇ ! ಅವರಿಂದ ನೀನು ಕೊಂಡುಕೊಳ್ಳದಿದ್ದರೆ, ನಾನೂ ಈ ನಮ್ಮ ನೆಂಟರೊಡನೆ ಸಾಯಬೇಕಾಗುವುದು” ಎಂದು ಖಚಿತವಾಗಿ ನುಡಿದನು.

ಅರಸನಿಗೂ ಬೆಸ್ತರ ಯಜಮಾನನಿಗೂ ಎಷ್ಟೋ ಹೊತ್ತು ಮಾತು ನಡೆಯಿತು. ಬೆಲೆಯನ್ನು ತೆಗೆದುಕೊಳ್ಳಬೇಕೆಂದು ಅರಸು, ತೆಗೆದುಕೊಳ್ಳುವುದಿಲ್ಲವೆಂದು ಅವನು. ಕೊನೆಗೆ ಚ್ಯವನನ ಬೆಲೆಯಾಗಿ ಒಂದು ಹಸುವನ್ನು ತೆಗೆದುಕೊಳ್ಳಲು ಬೆಸ್ತರ ಯಜಮಾನನು ಒಪ್ಪಿದನು. ಅದನ್ನು ಅಲ್ಲಿಯೇ ಯಾರಿಗೋ ದಾನ ಮಾಡಿಯೂ ಬಿಟ್ಟನು.

ಅರಸನು ಚ್ಯವನನನ್ನು ಅರಮನೆಗೆ ಬರಬೇಕು ಎಂದು ಪ್ರಾರ್ಥಿಸಿದನು. ಆತನು ನಕ್ಕು “ಈಗಲೀಗ ಚೆನ್ನಾಯಿತು. ಈ ಮನುಷ್ಯರ ಕಾಟ ತಪ್ಪಿಸಿಕೊಂಡು ಏಕಾಂತದಲ್ಲಿ ಇರಬೇಕು ಎಂದು ನಾನು ನೀರಿನೊಳಗೆ ಇದ್ದುದು. ಇಂಥ ನನಗೆ ಅರಮನೆಯೇ? ಅರಮನೆಯು ಭೋಗಸ್ಥಾನ. ನಮಗೆ ಅದು ಬೇಕಿಲ್ಲ” ಎಂದನು. ಚಕ್ರವರ್ತಿಯು “ಮಹರ್ಷಿ, ಒಂದೆರಡು ದಿನ ನಮ್ಮಲ್ಲಿದ್ದು ನಮಗೆ ಧರ್ಮ ವಿಚಾರಗಳನ್ನು ತಿಳಿಯಹೇಳಿ ಅನುಗ್ರಹಮಾಡಬೇಕು” ಎಂದು ಬೇಡಿದನು. ಆತನು “ಕಾಮ ಲೋಭಗಳಿಲ್ಲದ ಮನಸ್ಸಿಗೆ ತೋರುವುದೆಲ್ಲವೂ ಧರ್ಮವೇ ! ಅದರೂ ನೀನು ಧರ್ಮಶ್ರವಣಾರ್ಥವಾಗಿ ನನ್ನನ್ನು ಕರೆಯುವುದರಿಂದ ಬರುವುದಿಲ್ಲವೆನ್ನುವಂತಿಲ್ಲ ಬರುತ್ತೇನೆ ನಡೆ” ಎಂದನು.

ಚ್ಯವನನು ಹೊರಡುತ್ತಿದ್ದ ಹಾಗೆಯೇ ಬೆಸ್ತರ ಯಜಮಾನನು ಬಂದು ಮತ್ತೆ ನಮಸ್ಕಾರ ಮಾಡಿದನು. ಆ ಮಹರ್ಷಿಯು ನಗುತ್ತಾ “ಏನು ಮತ್ತೆ