ಪುಟ:Mrutyunjaya.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

"ಮಾತಾಡಿದ್ದು ಸರಿಯಾಗಿತ್ತೇನಪ್ಪ?"
ಮನಸ್ಸಿನಲ್ಲಿದ್ದುದನ್ನೇ ಇಪ್ಯುವರ್ ಹೇಳಿದ:
"ಸಮರ್ಪಕವಾಗಿತ್ತು ಅರ್ಚಕರೇ.”
ಮೆನೆಪ್‍ಟಾನನ್ನು ಅರ್ಚಕ ಜರೆಯಲಿಲ್ಲವೆಂದು, ಅಧಿಕಾರಿಯನ್ನು
ಸಂತೋಷಪಡಿಸುವುದಕ್ಕೋಸ್ಕರ ರೈತರನ್ನು ಹೀನಾಯವಾಗಿ ಕಾಣಲಿಲ್ಲ
ವೆಂದು,ಇಪ್ಯುವರ್ ಗೆ ಸಮಾಧಾನ. 'ಅಧಿಕಾರಿ ಮಹಾಶಯರು ನ್ಯಾಯ
ದಿಂದ ವರ್ತಿಸ್ತಾರೆ ಅನ್ನೋದರಲ್ಲಿ ನನಗೆ ಸಂದೇಹ ಇಲ್ಲ'-ಎಂದನಲ್ಲವೆ ಅರ್ಚಕ? ಹಾಗೆಯೇ ಆದರೆ ಎಷ್ಟು ಚೆನ್ನು!

ಭೂಮಾಲಿಕರೂ ಒಳಬಂದ ಅಪೆಟ್ ನನ್ನು ನೋಡಿದರು. ಟೆಹುಟಿ ಅರ್ಚಕನ ಮೂಲಕ ಬುದ್ಧಿ ಮಾತು ಹೇಳಿಸಿದ್ದು ಒಳ್ಳೆಯದಾಯಿತು ಎಂಬ ಅಭಿಪ್ರಾಯ ಅವರದು. ಆದರೆ, ಮಾತು ಮುಗಿದೊಡನೆಯೇ ಜನ ಚೆದರಲಿಲ್ಲವೆಂದು ಅವರು ನಿರಾಶರಾದರು. ಅವರ ಕಿವಿಗಳೆಲ್ಲ ಮಹಡಿಯತ್ತ ನೆಟ್ಟವು: ಮುಂದೇನು? ಅಧಿಕಾರಿ ಏನು ಮಾಡಬಹುದು?

         ಹೊರಗೆ ಘೋಷ ಮುಂದುವರಿದಿತ್ತು:
          "ಓ ಮೆನೆಪ್‍ಟಾ! ಓ ಮೆನೆಪ್‍ಟಾ!"
         ಬಕಿಲನಿಗೆ ಹೊಸ ನಿರ್ದೇಶದ ಅಗತ್ಯವಿರಲಿಲ್ಲ. ಮಹಾದ್ವಾರದ ಇಕ್ಕೆಲಗಳಲ್ಲಿದ್ದ ಭಟರು, ಅವನ ಸೂಚನೆಯಂತೆ, ಗದೆ ಬೀಸಿದರು---"ತೊಲಗಿ! ತೊಲಗಿ!" ಎನ್ನುತ್ತ. ಸ್ನೊಫ್ರು, ಸೆಬೆಕ್ಖು ಮತ್ತಿತರರು ಸ್ವಲ್ಪ ಹಿಂದಕ್ಕೆ ಸರಿದರು. ಏಟು ತಗಲಿದ ಕೆಲವರು ಚೀರಾಡಿದರು.
        ಜನ ಚೆದರದೆ ಇದ್ದುದನ್ನು ಗಮನಿಸಿದ ಬಕಿಲ ಆ ಕಾವಲು ಭಟರಿಗೆ ವಾಪಸಾಗಲು ಸೂಚಿಸಿದ. (ಸಹಸ್ರಾರು ಉದ್ರಿಕ್ತ ಜನರ ಮಧ್ಯಕ್ಕೆ ಇಬ್ಬರೇ ಹೋಗುವುದು ಯೋಗ್ಯವಾಗಿರಲಿಲ್ಲ.) ಪ್ರಾಕಾರದ ಮೇಲೆ ಬಿಲ್ಲು ಹಿಡಿದು ನಿಂತಿದ್ದ ಮೂವರಿಗೆ ಬಾಣ ಪ್ರಯೋಗಿಸುವಂತೆ ಸನ್ನೆ ಮಾಡಿದ.
        ಗೋಡೆಯ ಮೇಲೆ ಭಟರು ಹೆದೆ ಏರಿಸುತ್ತಿದ್ದುದನ್ನು ಕಂಡವರು 
    "ಹೋ! ಹೋ!" ಎಂದರು. ಬಾಣಗಳು ಸುಂಯ್ ಗುಟ್ಟಿದುವು.ಯಾವುದೇ ನಿರ್ದಿಷ್ಟ ಮೃಗದ ಬೇಟೆಯಲ್ಲ. ಗೊತ್ತು ಗುರಿಯಿಲ್ಲದ ಎಸೆತ.


‌‌‌