ಮೃತ್ಯುಂಜಯ ೯೩
ಸಂಪೂರ್ಣ ಯಶಸ್ಸು ಸಿಗಬೇಕು. ಅದು ಬಲ ಪ್ರದರ್ಶನದಿಂದ ಮಾತ್ರ ಸಾಧ್ಯ. ಬಾಣ ಪ್ರಯೋಗದಿಂದ ಕೆಲವರು ಗಾಯಗೊಂಡಿದ್ದಾರೆ. ಒಬ್ಬಿಬ್ಬರು ಸಾಯಬಹುದು. ಅಷ್ಟು ಮಾಡಿದ್ದರಿಂದ, ಆ ಜನ ಬಾಲ ಮಡಚಿಕೊಂಡು ಹಿಮ್ಮೆಟ್ಟಿದರು. ಅರ್ಚಕನ ಮಾತಿಗೂ ಅವರು ಕಿವಿಗೊಟ್ಟಿರಲಿಲ್ಲ. ಆ ಪಾಪಿ ಮಾತನಾಡಿದ್ದೂ ಅರೆಮನಸ್ಸಿನಿಂದ. (ಎಲ್ಲ ದೇವಮಂದಿರಗಳ ಅರ್ಚಕರೂ ಹೀಗೆ ಉದಾಸೀನರಾದರೆ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಬಿಗಿ ಏನೇನೂ ಉಳಿಯುವುದಿಲ್ಲ. ಹಾಯಿಪಟ ಹಾರಿದ ನಾವೆ ಹೇಗೆ ತಾನೇ ಸರಿಯಾಗಿ ಚಲಿಸೀತು ?) ಸದ್ದಡಗಿ ಬಹಳ ಹೊತ್ತಾದರೂ 'ಓ ಮೆನೆಪ್‍ಟಾ ಓ ಮೆನೆಪ್‍ಟಾ' ಘೋಷ ಟೆಹುಟಿಯ ಒಳಕಿವಿಯಲ್ಲಿ ಮೊರೆಯುತ್ತಿತ್ತು. ಈ ಒಬ್ಬ ವ್ಯಕ್ತಿಯಿಂದಾಗಿ ಎಷ್ಟೊಂದು ಅವಾಂತರ! బಕಿల ಇದ್ದುದರಿಂದ ಸರಿಹೋಯಿತು. ಇವನು ಅಧಿಪತಿಯಾಗುವ ಅರ್ಹತೆ ಉಳ್ಳವನು. ಇಂಥವರು ಹತ್ತಿಪ್ಪತ್ತು ಜನ ದೊರೆತರೆ ಸಾಕು, ಇಡೀ ದೇಶವನ್ನೇ ದಕ್ಷತೆಯಿಂದ ಆಳಬಹುದು. ಮೆನೆಪ್‍ಟಾನನ್ನು ಈ ರಾತ್ರಿಯೇ ಮುಗಿಸಬಹುದು. ಆದರೆ ನಾಳೆ ಕಂದಾಯ ವಸೂಲಿಗೆ ಇದರಿಂದ ತೊಂದರೆಯಾದರೊ?
"ಬಕಿಲ !" "ಅಪ್ಪಣೆಯಾಗಲಿ.” "ಆ ಜನ ಮತ್ತೆ ಬಂದಾರು ಅಂತಿಯಾ ?” "ಬರಲೂ ಬಹುದು. ನಾವು ಸಿದ್ಧರಾಗಿದ್ದೇವೆ.” "ಒಳ್ಳೇದು.” ಟೆಹುಟಿ ಪ್ರಾಂತಪಾಲನತ್ತ ನೋಡಿದ. "ಯಾಕೆ ತಡ ? ದೀಪ ಹಚ್ಚಿಸಿ ! ರಾಜಧಾನಿಯಿಂದ ಅಧಿಕಾರಿ ಬಂದಾಗ ದೀಪೋತ್ಸವ ಬೇಡವೆ ?" ಟೆಹುಟಿಯ ಆಪೇಕ್ಷೆಯನ್ನು ಅರ್ಥ ಮಾಡಿಕೊಂಡ ಬಕಿಲ ಕೆಳಕ್ಕೆ ಓಡಿದ, ರಾಜಗೃಹದ ಚಾರಕರಿಗೆ ನಿರ್ದೇಶಗಳನ್ನು ನೀಡಲು.