ಪುಟ:Mrutyunjaya.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೦೧

ಮಕ್ಕಳೆಲ್ಲ ಸಣ್ಣವು.ಅವನ ಹೆಂಡತಿಗೆ ಧೈರ್ಯ ಹೇಳ್ಬೇಕು.
ಅನ್ಪುಗೆ ಪೂರ್ತಿ ಗುಣವಾಗೋ ವರೆಗೂ ಅವರ ರಕ್ಷಣೆಯ ಜವಾಬ್ದಾರಿ ನಮ್ಮದು.”
“ ಹುಂ. ಗಹನವಾದ ವಿಷಯ, ಇನ್ನೊಂದಿದೆ.”
ತಾನದನ್ನು ಬಲ್ಲೆ ಎನ್ನುವಂತೆ ಮೆನೆಪ್‌‌ಟಾ ಮುಗುಳುನಕ್ಕ.
"ರಾಜಗೃಹದ್ದೆ ?” ಎಂದು ಕೇಳಿದ.
“ ಹೌದು. ಪ್ರಾಂತಪಾಲರಿಲ್ಲ ಕಾವಲು ಭಟರಿಲ್ಲ ಎಂದರೆ ಕಳ್ಳಕಾಕರು ಮೆರೀಬಹುದು.”
"ಜನಾಭಿಪ್ರಾಯ ಏನು ?”
“ ಅವರು ದಂಗಾಗಿದ್ದಾರೆ. ಪೆರೋನ ದಂಡು ಬರಬಹುದೂಂತ ಕೆಲವರ ಅಭಿಪ್ರಾಯ. ಆದರೆ, ಕಳೆದ ವರ್ಷ ರಾಜಧಾನಿಯಿಂದ ವಾಪಸಾದ ವೃದ್ಧ ಸೈನಿಕ ಹೆಮ್‌‌‌‌‌‌ಟಿ ರಾಜಧಾನಿಯಲ್ಲಿ ಈಗ ಸೈನ್ಯವೇ ಇಲ್ಲ ಅಂತಾನೆ. ಇದ್ದ ಸೈನ್ಯವನ್ನು ಸೈನ್ಯ ಗಡಿಗೆ ಕಳಿಸಿದ್ದಾರಂತೆ. ಈಗ ಅಲ್ಲಿಯೇ ಅದರ ಠಾಣ್ಯ.”
" ಅರ್ಚಕರ ಅಭಿಮತ ?”
"ಯಾರು ಆಳಿದರೂ ದೇವರ ಹಿರಿತನ ಇದ್ದದ್ದೇ_ಅಂತೆ.
ಇಪ್ಯುವರ್__"
"ಏನಂತೆ ?"
“ ಹಳೆಯ ದಾಖಲೆಗಳನ್ನೆಲ್ಲಾ ನೋಡಿದ. ಇಂಥ ಘಟನೆ ಹಿಂದೆ ಆದ ಪ್ರಸ್ತಾಪ ಎಲ್ಲಿಯೂ ಇಲ್ಲ; ಪೆರೋ ತೀರ್ಪು ನೀಡೋವರೆಗೂ ನಾವು ನಿಶ್ಚಿಂತೆ ಯಾಗಿರಬಹುದು__ ಅನ್ತಾನೆ.”
ಬಾಗಿಲು ತೆರೆಯಿತು. ಆಪ್ತಾಲೋಚನೆಗೆ ಭಂಗ ಬಂತು. ಖ್ನೆಮ್‌‌‍ ಹೊಟೆಪ್‌‌‌‌ ಒಳಗೆ ಬಂದ.
"ಬಾ ಖ್ನೆಮು,” ಎಂದು ಕರೆದ ಮೆನೆಪ್‌‌ಟಾ, ಆತ್ಮೀಯತೆಯಿಂದ. ಸೊಫ್ರುವಿನತ್ತ ಹೊರಳಿ "ನಮ್ಮ ದಳಪತಿಯ ಅಭಿಪ್ರಾಯ ಕೇಳೋಣ,” ಎಂದ.