ಪುಟ:Mrutyunjaya.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀರಾನೆ ಪ್ರಾಂತದಿಂದ ಅಬ್ಟುವಿಗೆ ನೀಲನದಿಯಲ್ಲಿ ಒಂದು ಹಗಲಿನ
ಒಂದು ಇರುಳಿನ ಪ್ರವಾಸ. ದೋಣಿಯಲ್ಲಿದ್ದ ಯಾತ್ರಿಕರು ನಾಲ್ವತ್ತು ಮಂದಿ.
ಅಂಬಿಗ ಬಟಾ ಆ ನಾವೆಯ ಒಡೆಯ. ಹುಟ್ಟು ಹಾಕುತ್ತಿದ್ದ ನಾಲ್ವರು ಅವನ
ನೌಕರರು.
ಮೆನೆಪ್ಟಾ ಆ ಯಾತ್ರಿಕರಲ್ಲೊಬ್ಬ. ಪತ್ನಿ ನೆಫಿಸ್ ಮತ್ತು ಆರು ವರ್ಷ
ಪ್ರಾಯದ ಮಗ ರಾಮೆರಿಪ್ಟಾರೊಂದಿಗೆ ಐಗುಪ್ತ ದೇಶದ ಪರಮ ಪುಣ್ಯ
ಕ್ಷೇತ್ರವಾದ ಅಬ್ಟುವಿನ ಸಂದರ್ಶನಕ್ಕೆ ಆತ ಹೊರಟಿದ್ದ. ಅವರಿಗೆ ಆ
ಯಾತ್ರಾನುಭವ ಹೊಸದು. ಅವರಷ್ಟೇ ಅಲ್ಲ; ಒಬ್ಬಿಬ್ಬರ ಹೊರತಾಗಿ ತಂಡದ
ಎಲ್ಲರೂ ಅಬ್ಟುವಿಗೆ ಬರುತ್ತಿದ್ದುದು ಅದೇ ಮೊದಲ ಬಾರಿ.ಅನುಭವಿ
ಯುವಕ ಅಂಬಿಗ ಬಟಾನೇ ಅವರೆಲ್ಲರಿಗೆ ಮಾರ್ಗದರ್ಶಿ.
ಸೂರ್ಯೋದಯಕ್ಕಿನ್ನೂ ತುಸು ಹೊತ್ತಿದ್ದಾಗಲೇ ದೋಣಿ ಅಬ್ಟುವಿನ
ಹತ್ತಿರಕ್ಕೆ ಬಂತು.
ಕೈಗೂಸೊಂದು ತಾಯಿಯ ಮೊಲೆಗಾಗಿ ತಡಕಾಡುತ್ತ ಅತ್ತಿತು, ಹೆತ್ತ
ವಳನ್ನು ಎಚ್ಚರಿಸಿತು. ಕುಳಿತಲ್ಲೇ ವಿವಿಧ ಭಂಗಿಗಳಲ್ಲಿ ನಿದ್ದೆ ಹೋಗಿದ್ದವರು
ಮೆಲ್ಲ ಮೆಲ್ಲನೆ ಕಣ್ಣು ಬಿಟ್ಟರು.
ಅಂಬಿಗನ ಕಂಚಿನ ಕಂಠದಿಂದ ಮಾತು ಕೇಳಿ ಬಂತು:
"ಅಬ್ಟುವಿನ ದೋಣಿ ಕಟ್ಟೇಲಿ ನೂಕು ನುಗ್ಗಲು. ಇಲ್ಲೇ ಇಳಿದು
ಮುಖಮಾರ್ಜುನ ಮುಗಿಸಿಕೊಳ್ಳಿ.ಸರಿಯಾ ಮೆನೆಪ್ಟಾ?
ಮೆನೆಪ್ಟಾ ಅಂಬಿಗನಿಗೆ ಇಷ್ಟ. ದೃಢಕಾಯನಾದ ಮಿತಭಾಷಿ
ಯುವಕ. ನೀಲನದಿಯ ಆಳಕ್ಕೆ ಸಮನಾದ ಗಾಂಭೀರ್ಯ. ಏನು ಕೇಳಿದರೂ
ಅರೆ ಕ್ಷಣ ಯೋಚಿಸಿ, ಮುಗುಳ್ನಗೆ ಸೂಸಿ, ಉತ್ತರವೀಯುತ್ತಿದ್ದ. ಅವನ
ಶಾಂತ ಮುಖಮುದ್ರೆ ಉಳಿದೆಲ್ಲರ ಗಮನ ಸೆಳೆಯುತ್ತಿತ್ತು.