ಪುಟ:Mrutyunjaya.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿರಿಯರ ಮಾತಿಗೆ ಕಿವಿಗೊಡುತ್ತ, ಅದನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತ ತಾಯಿಯ ಬಳಿ ರಾಮೆರಿಪ್‍ಟಾ ನಿಂತಿದ್ದ. ಅವನನ್ನು ಮೆನೆಪ್‍ಟಾ ಕರೆದ.

"ರಾಮೆರಿ, ಹೋಗಿ ಖ್ನೆಮ್‍ಹೊಟಿಪ್ ಮಾವನನ್ನು ಕರೆದುಕೊಂಡು ಬಾ."

ಹುಡುಗ ಬಾಣದಂತೆ ಓಡಿದ.

ರಾಜಗೃಹದ ದಾಸದಾಸಿಯರ ಪ್ರಶ್ನೆ...." ಅವರಿಗೆಲ್ಲ ಸ್ವಾತಂತ್ರ್ಯ ಕೊಡ್ಬೇಕು. ಅವರು ಮುಕ್ತರು. ಎಲ್ಲಿಗೆ ಬೇಕಾದರೂ ಹೋಗಲಿ," ಎಂದ ಮೆನೆಪ್‍ಟಾ. ಸೆಬೆಕ್ಖು "ಭೂಮಾಲಿಕರ ದಾಸರ ಬಿಡುಗಡೆಯೂ ಸಾಧ್ಯವಾಗ್ಬೇಕು," ಎಂದ. "ಅದೆಷ್ಟು ಹೊತ್ತು? ಉದಿಸಿದ ರಾ ಮೇಲೆ ಬರದೆ ಇರುತ್ತಾನಾ?" ಎಂದು ಸ್ನೊಫ್ರು ನುಡಿದ.

ಬರಹೇಳಿದಾರೆ ಎಂದನಷ್ಟೇ ಹೊರತು, ಎನ್ನೇನನ್ನೂ ರಾಮೆರಿಪ್‍ಟಾ ಖ್ನೆಮ್‍ಹೊಟಿಪ್‍ಗೆ ತಿಳಿಸಲಿಲ್ಲ. ಖ್ನೆಮ್ ಬಿರುಸಾಗಿ ನಡೆದು ಬಂದು, ಹೊಸ್ತಿಲು ದಾಟಿದೊಡನೆಯೇ ನಿಂತು, ತುಸು ಗೋಣು ಆಡಿಸಿ "ವಂದನೆ" ಎಂದ. ಎಡಭುಜದಲ್ಲಿ ಬಿಲ್ಲು ಬಲಭುಜದಾಚೆ ಬೆನ್ನಲ್ಲಿ ಬತ್ತಳಿಕೆ ಇದ್ದುವು.

ಮೆನೆಪ್‍ಟಾನೆಂದ:

"ಖ್ನೆಮು, ನೀನಿನ್ನು ಪ್ರಾಂತದ ಕಾವಲು ಭಟರ ದಳಪತಿ. ಇನ್ನು ನಿನ್ನ ಲಾಂಛನ ಕಟಿಯಲ್ಲಿ ಕಠಾರಿ; ಕೈಯಲ್ಲಿ ನೀಳ ಕೋಲು."

ಭಾವೋದ್ವೇಗ ಖ್ನೆಮ್‍ಹೊಟಿಪ್‍ನನ್ನು ಬಾಧಿಸಿತು. ವಂದಿಸುವ ನೆಪದಲ್ಲಿ ಆತ ತಲೆಯನ್ನು ಸ್ವಲ್ಪ ಹೆಚ್ಚಾಗಿ ಬಾಗಿಸಿ, ಅಲ್ಲಿದ್ದ ಎಲ್ಲರ ನೋಟದಿಂದ ಮುಖವನ್ನು ಮರೆಮಾಡಿದ.

ಖ್ನೆಮ್ ಇತರ ತೀರ್ಮಾನಗಳ ವಿವರವನ್ನೂ ತಿಳಿದು ಸೆಮ, ಥಾನಿಸ್, ಹೆಮೊನ್‍ರನ್ನೂ ಹೆಮ್‍ಟಿಯನ್ನೂ ಕರೆತರಲು ಹೋದ....

ಬಂದವರಲ್ಲಿ ಹೆಮ್‍ಟಿ ಉತ್ಸುಕನಾಗಿದ್ದ. ಉಳಿದ ಮೂವರು ಯೋಚಿಸುತ್ತಿದಂತೆ ಕಂಡಿತು. ಸ್ನೊಫ್ರು ಬಹಳ ಒತ್ತಾಯಿಸಿದ ಮೇಲೆ ಸೆಮ ಮೆಲ್ಲನೆ ಅಂದ:

"ಹೀಗೆಲ್ಲ ಮಾಡೋದು ಸರಿಯೊ ತಪ್ಪೊ ಗೊತ್ತಾಗ್ತಾ ಎಲ್ಲ."