ಪುಟ:Mrutyunjaya.pdf/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ೧೧೭
ಮೃತ್ಯುಂಜಯ

ನಗುತ್ತ ಆತ ಬಂದ. ಅವನ ಹಿಂದಿದ್ದರು ಸೆಮ, ಥಾನಿಸ್, ಹೆಮೊನ್
ಮತ್ತು ಹೆಮ್‍ಟಿ. "ಹಿರಿಯರು,” ಎಂದರು ಯಾರೋ. ಅವರೆಲ್ಲರ ಮಟ್ಟಿಗೆ
ಹೆಮ್‍ಟಿಯೊಬ್ಬ ಪ್ರಶ್ನೆಯಾದ. ಹಿರಿಯರ ಹಿಂದೆ ಸ್ನೋಫ್ರು ಮತ್ತು
ಸೆಬೆಕ್ಖು. “ವಯಸ್ಸಾಗದಿದ್ದರೇನಾಯ್ತು ? ಇವರಿಗೂ ಹಿರಿಯರದೇ ಸ್ಥಾನ,”
ಎಂದರು ಬೇರೆ ಯಾರೋ.
ಬಯಲಿನ ಸುವ್ಯವಸ್ಥೆ ಕಂಡು ಮೆನೆಪ್‍ಟಾ ಬೆರಗಾದ. ಸೆಬೆಕ್ಖು
ಹೆಮ್ಮೆಯಿಂದ ಬೀಗಿದ.
ವೇದಿಕೆಯ ಕಡೆಗೆ ಸೀಳುದಾರಿ ಆರಂಭವಾಗುವಲ್ಲಿ ಖ್ನೆಮ್ಹೊಟೆಪ್ ನಿಂತಿದ್ದ. ಆತ ಬಾಗಿ ವಂದನೆ ಸಲ್ಲಿಸಿ ಪಕ್ಕಕ್ಕೆ ಸರಿದ. ಅದೇ ಸೂಚನೆ
ಎಂಬಂತೆ, ಎಲ್ಲರೂ ಚಪ್ಪಾಳೆ ತಟ್ಟಿ ನಾಮೋಚ್ಚಾರ ಮಾಡಿದರು :
"ಓ ಮೆನೆಪ್ಟಾ ! ఓ ಮೆನೆಪ್ಟಾ !"
ನಾಯಕ ವೇದಿಕೆ ತಲುಪುವ ವರೆಗೂ ಕರತಾಡನ
. ವೇದಿಕೆಯ ಮೇಲೆ ಖ್ನೆಮ್ಹೊಟೆಪ್ ಮೂರೇ ಪೀಠಗಳನ್ನು ಇರಿಸಿದ್ದ.
ಅದನ್ನು ನೋಡಿಯೂ ನೋಡದವನಂತೆ ಮೆನೆಪ್ಟಾ, “ನೀವು ಮೇಲೆ
ಹೋಗಿ” ಎಂದ, ಹಿರಿಯರನ್ನು ಕುರಿತು. ಅವರು ಒಪ್ಪಲಿಲ್ಲ. ಆ ಕಡೆಯ
ಈ ಕಡೆಯ ಎರಡೆರಡು ಕೆಳಗಿನ ಪೀಠಗಳತ್ತ ಸರಿದರು. ಖ್ನೆಮ್ಹೊಟೆಪ್
ಮೆನೆಪ್ಟಾನನ್ನು ವೇದಿಕೆಯ ಮೇಲಿನ ನಡುವಣ ಪೀಠಗಳತ್ತ ಕರೆದೊಯ್ದ.
ಸ್ನೊಫ್ರು, ಸೆಬೆಕ್ಖುರನ್ನು “ಬನ್ನಿ, ಬನ್ನಿ" ಎಂದು ಮೆನೆಪ್ಟಾ ಕರೆದ.
ಅವರೆಲ್ಲ ಆಸೀನರಾದ ಮೇಲೆ ಮತ್ತೆ ಚಪ್ಪಾಳೆಯ ಹರ್ಷಧ್ವನಿ
ಕೇಳಿಸಿತು.
ಖ್ನೆಮ್ಹೊಟೆಪ್ ನ ಸಂಜ್ಞೆಯಂತೆ ಕರತಾಡನ ನಿಂತು, ಜನರೆಲ್ಲ
ಕುಳಿತರು. ಈಗ ಎಲ್ಲರದೂ ನಿರೀಕ್ಷಣೆಯ ನೋಟ. ಎಲ್ಲರ ಕಣ್ಣುಗಳೂ
ಪ್ರಮುಖರ ಮೇಲೆ.
ವೇದಿಕೆಯ ಬಳಿ ಕೆಳಗೆ ನಿಂತಿದ್ದ ಇಪ್ಯುವರ್ನನ್ನು ಹತ್ತಿರಕ್ಕೆ ಕರೆದು,
"ಶಸ್ತ್ರಾಗಾರದಿಂದಲೋ ಲಾಂಛನಗಳ ಕೊಠಡಿಯಿಂದಲೋ ಕೋಲು
ತರಬೇಕಲ್ಲಾ," ಎಂದ ಮೆನೆಪ್ಟಾ.