ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೆಜಮುಟ್ ಮೂತಿ ತಿರುವಿ ಮೌನ ತಳೆದಳು. ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.
ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು. "ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ. " ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್.
"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."
"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು." "ಸಂಶಯವಿಲ್ಲ." "ಮಂದಿರಕ್ಕೆ ಯಾವಾಗ ಬರ್ತೀರಿ?" "ನಾಳೆ ಆದೀತೆ?" "ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ." "ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು-ನಾವೆಲ್ಲಾ ಬರ್ತೇವೆ." ನಿನ್ನೆ ತನಕ ಹೋಗು ಬಾ ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು- ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.