ಪುಟ:Mrutyunjaya.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

ಈ ಚಿಗುರು
ಸೃಷ್ಟಿಕರ್ತ !
ಓ ನೀಲ ಐಸಾ ಓ ಖ್ನೆಮು ಐಸಾ!
ಓ ನದ ನೀಲ ಓ ಖ್ನೆಮು ದೇವ...."
ಪಲ್ಲವಿಯನ್ನು ಎಲ್ಲ ಕಂಠಗಳೂ ನುಡಿದುವು :
"ಓ ನದ ನೀಲ ಓ ಖ್ನೆಮು ದೇವ....”

.... ಅಬ್ಟುವಿನ ದೋಣಿ ಕಟ್ಟೆ ಬಲು ನೀಳವಾದದ್ದು. ಮೇಲಕ್ಕೂ
ಕೆಳಕ್ಕೂ ದೃಷ್ಟಿ ಹರಿಯುವ ವರೆಗೆ ನದಿಯ ಅಂಚಿಗೆ ಕಲ್ಲುಗಳ ಕಟಕಟೆ ಇತ್ತು.
ಸಹಸ್ರಾರು ತೆಪ್ಪಗಳೂ ದೋಣಿಗಳೂ ಕಟ್ಟೆಯುದ್ದಕ್ಕೂ ತಂಗಿದ್ದುವು. ಅಬ್ಟು
ಗುಡ್ಡದ ಕೆಳಗೆ ವಿಸ್ತಾರ ಪ್ರದೇಶದಲ್ಲಿ ಹೊಸ ನಗರವನ್ನೇ ನಿರ್ಮಿಸಿದಂತಿತ್ತು,
ಹಲವು ಹದಿನೆಂಟು ಪ್ರಾಂತಗಳ ಜನಸ್ತೋಮ.
ದಡ ತಲಪುವ ಮುನ್ನ ಇತರ ದೋಣಿಗಳಿಗೆ ಢಿಕ್ಕಿ ಹೊಡೆಯದೆ ಇರು
ವುದು ದೊಡ್ಡ ಸಾಧನೆ. ಬಟಾನ ಕಿರಿಚುವ ಕಂಠಕ್ಕೆ ಬಿಡುವೇ ಇಲ್ಲ. ಆರ್ಭಟ,
ಪರಿಹಾಸ್ಯ, ಬೈಗಳು....
ಇತರ ಅಂಬಿಗರು ಬಟಾನ ಕಡೆ ನೋಡಿದರು; ದೋಣಿ ಕಟ್ಟೆಯ
ವೇದಿಕೆಯ ಮೇಲೆ ನಿಂತಿದ್ದವರತ್ತ ಬೊಟ್ಟು ಮಾಡಿದರು.
ಇದ್ದಕ್ಕಿದ್ದಂತೆ ಸ್ವರ ಬದಲಿಸಿ ಬಟಾ ಗೊಣಗಿದ :
" ಅಗೋ ರಾಜ ಭಟರು ! ನೀವೆಲ್ಲ ಇಳಿದ್ಮೇಲೆ ದೋಣೀನ ಕೆಳಕ್ಕೆ
ಒಯ್ದು ಕಟ್ತೇನೆ. ರಾತ್ರೆ ಅಲ್ಲಿಂದ್ಲೇ ಹೊರಡೋಣ.”
“ಪೆರೋ ಬರ್‍ತಾರೆ, ಅಲ್ಲವಾ ?”
___ಮೆನೆಪ್‍ಟಾ ಕೇಳಿದ.
ಒಬ್ಬ ರಾಜಭಟನ ಗರ್ಜನೆಯೇ ಆ ಪ್ರಶ್ನೆಗೆ ಉತ್ತರವಾಯಿತು :
“ಬಿಸಿಲೇರೋ ಹೊತ್ತಿಗೆ ಪೆರೋ ಸವಾರಿ ಬಿಜಯ ಮಾಡ್ತದೆ. ಕಟ್ಟೆ
ಖಾಲಿ ಮಾಡಿ! ದೋಣಿಗಳನ್ನ ಕೆಳಗಡೆಯೋ ಮೇಲ್ಗಡೆಯೋ ನಿಲ್ಲಿಸಿ!"
ನಿಮಿಷ ಬಿಟ್ಟು ಮತ್ತೊಬ್ಬ ರಾಜಭಟ ಅದೇ ಆದೇಶವನ್ನು ಗುಡುಗಿದ.