ಪುಟ:Mrutyunjaya.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪ ಮೃತ್ಯುಂಜಯ

    ಎದುರು ದಂಡೆಯಲ್ಲಿ ಪ್ರತಿಧ್ವನಿ ಕಂತುವುದಕ್ಕೆ ಮೊದಲೋ ಮೂರನೆಯ ರಾಜಭಟ ಆದೇಶದ ಪುನರುಚ್ಚಾರ ಆರಂಭಿಸಿದ.
    ತನ್ನ ಪ್ರಯಾಣಿಕರು ದೋಣಿಯಿಂದ ಇಳಿಯುತ್ತಿದ್ದಂತೆಯೇ ಬಟಾ ಪರಿಹಾಸ್ಯದ ಧ್ವನಿಯಲ್ಲಿ ನುಡಿದ :
    "ಬುತ್ತಿ ಗಿತ್ತಿ ದೋಣೀಲಿ ಬಿಟ್ಹೋಗ್ಬೇಡಿ....ನೀವು ಬರೋದರೊಳಗೆ ಎಲ್ಲಾ ಧ್ವಂಸ ಮಾಡೇವು !”
    ಇದನ್ನು ಕೇಳಿ "ಓಹೋ! ಓಹೋ!" ಎಂದರು ಕೆಲವರು.
    ಕೈಗೂಸಿನ ತಾಯಿ ಆಹೂರಾ ಕೇಳಿದಳು :
    “ನಮ್ಮದರಿಂದ ರೊಟ್ಟಿ ಗಿಟ್ಟಿ ಕೊಟ್ಟಿರ బటా ಅಣ್ಣ?"
    ಬಟಾ ಉತ್ತರಿಸಿದ :
    “ ಬೇಡ ತಂಗಿ. ನಮಗೆಲ್ಲ ನನ್ನ ಯಜಮಾನಿತಿ ಕಟ್ಕೊಟ್ಟಿದ್ದಾಳೆ.”
    ಅಷ್ಟರಲ್ಲೆ ದಕ್ಷಿಣದಿಂದ ಯಾತ್ರಿಕರನ್ನು ಹೊತ್ತಿದ್ದ ದೊಡ್ಡ ದೋಣಿ ಬಂತು.
    ಒಬ್ಬ ರಾಜಭಟ ಕಿರಿಚಿದ:
    "ಕತ್ತೇ ಮಕ್ಳು! ಯಾರಿಗೆ ಹೇಳ್ತಿರೋದು? ಏಯ್ ನೀನು! ತೆಗೆ ಯಯ್ಯ ದೋಣಿ!"
    ಅದು ತನ್ನನ್ನು ಉದ್ದೇಶಿಸಿ ಆಡಿದ ಮಾತು ಎಂಬುದು ಬಟಾನಿಗೆ ಸ್ಪಷ್ಟವಾಯಿತು. ಹುಟ್ಟು ಹಾಕುವಂತೆ ನೌಕರರಿಗೆ ಸೂಚನೆ ನೀಡುತ್ತ, ತನ್ನ ಯಾತ್ರಿಕ ತಂಡದತ್ತ ಕೈಬೀಸಿ ಅವನು ನುಡಿದ :
    " ಜಾತ್ರೇಲಿ ತಪ್ಪಿಸ್ಕೊಂಡೀರಿ, ಜಾಗ್ರತೆ! ಮೆನೆಪ್‍ಟಾ ಅಣ್ಣನ ಮಾತ್ನಂತೆ ನಡ್ಕೊಳ್ಳಿ. ನಾನು ಕೆಳಗಡೆ ಇರ್‍ತೇನೆ........ ಕತ್ತಲಾದ ತಕ್ಷಣ ಹೊರಟು ಬನ್ನಿ."
    ದೋಣಿ ಕಟ್ಟೆಯ ಅಧಿಕಾರಿಯ ಆಜ್ಞೆ ಕೇಳಿಸಿತು:
     " ಮೇಲಕ್ಕೂ ಕೆಳಕ್ಕೂ ಹೋಗಿ ! ಬರ್‍ತಿರೋ ದೋಣಿಗಳನ್ನ ಅಲ್ಲಲ್ಲೇ ತಡೀರಿ!”
    ಕಟ್ಟೆಯ ಗೂಟಕ್ಕೆ ಕಟ್ಟಿದ್ದ ಎರಡು ಕಿರುದೋಣಿಗಳನ್ನು ಇಬ್ಬಿಬ್ಬರು