ಪುಟ:Mrutyunjaya.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ೫

     ಯೋಧರು ಏರಿದರು. ಅವುಗಳದು ನೀರು ಸೀಳಿ ಸಾಗುವ ಶೀಘ್ರ ಚಲನೆ. ದೋಣಿ ಕಟ್ಟೆಯುದ್ದಕ್ಕೂ ಬಂದು ಮೇಲಕ್ಕೆ ಸಾಗಿತು ; ಇನ್ನೊಂದು ಕೆಳಕ್ಕೆ  ಬರುತ್ತಿದ್ದ ದೋಣಿಗಳನ್ನು ಕಟ್ಟೆಯಿಂದ ದೂರವಿರಿಸುವ ಹೊಣೆ ಅವರದು.
     ದೋಣಿಕಟ್ಟೆಯಿಂದ ಗೋರಿಗಳ ಗುಡ್ಡದ ವರೆಗೂ ದಾರಿ ಅಗಲವಾಗಿತ್ತು. ಅದು ಬೆಳಗಾಗುವುದರೊಳಗೆ ರೂಪುಗೊಂಡಿದ್ದ ಜಾತ್ರೆಯ ಸಂತೆ. ಅಲ್ಲಲ್ಲಿ ಸೆಣಬಿನ ಅರಿವೆಯ ಗೂಡಾರಗಳು. ಅಲ್ಲಿ ರಟ್ಟಿ ಪಾನೀಯಗಳಿದ್ದುವು. ಉಪ್ಪು ಬೆರೆಸಿ ಕಾಪಾಡಿದ ಮೀನು, ಒಣಗಿಸಿದ ಮಾಂಸ, ಈರುಳ್ಳಿ, ನೀರುಸೌತೆಕಾಯಿ, ಖರ್ಜೂರ, ಆಂಜೂರ___ಇವೆಲ್ಲ ಇದ್ದುವು ಮಾರಾಟಕ್ಕೆ. ಮರದಲ್ಲಿ ಕೊರೆದ ದೇವ ದೇವತೆಗಳ ಮೂರ್ತಿಗಳನ್ನು ಮಾರುವ ಅಂಗಡಿಗಳು. ಬೆಳ್ಳಿಯ ಬಂಗಾರದ ಉಂಗುರಗಳು, ಓಲೆಗಳು, ಹಾರಗಳು, ತಾಳೆ ಮರದ ತೊಗಟಿಯ ಪಾದರಕ್ಷೆಗಳು ; ಪೀಠೋಪಕರಣಗಳು, ದಂತದ, ಸ್ವರ್ಣದ ಕೆತ್ತನೆಯ ಸಾಮಗ್ರಿಗಳು; ಕಂಚಿನ ಚೂರಿ, ಕಠಾರಿ; ಕೊರೆದ ಮರದ ಕೈಗೋಲು, ನಡೆಗೋಲು; ಸೆಣಬಿನ ನುಣುಪಾದ ಅಂಗವಸ್ತ್ರಗಳು; ಕವಡೆ ಚಿಪ್ಪುಗಳ ಮಣಿ ಸರಗಳು; ಚೆಂಡು, ಗೋಲಿ; ಸುಗಂಧ ದ್ರವ್ಯಗಳು....
     ಬಿಸಿಲೇರುವುದಕ್ಕೆ ಮುನ್ನವೇ ಈ ಮಾರ್ಗ ತುಳಿದವರು ಸಹಸ್ರಾರು ಜನ. ಆ ಸಂದಣಿಯ ಒಂದಂಗವಾಗಿತ್ತು, ನೀರಾನೆ ಪ್ರಾಂತದ ನಾಲ್ವತ್ತು ಮಂದಿಯ ತಂಡ. ಅಂಗಡಿಕಾರರೆಲ್ಲ ಗಿರಾಕಿಗಳನ್ನು ಕರೆಯುವವರೇ; ತಮ್ಮಲ್ಲಿದ್ದ ಸರಕುಗಳ ಗುಣಗಾನ ಮಾಡುವವರೇ.
     ಮೆನೆಪ್‍ಟಾ ಗುಡ್ಡದತ್ತ ನೋಡಿದ. ಅದರ ಮೇಲಣ ಭವ್ಯ ಮಂದಿರ ಒಸೈರಿಸ್ ದೇವಾಲಯ ಎಂದು ಆತ ಕೇಳಿ ಬಲ್ಲ. ದಾರಿಯ ಕೊನೆಯ ಏರಿಗೆ ಮುನ್ನ ತಾಳೆ ಮರಗಳ ಒಂದು ಪುಟ್ಟ ತೋಪು ಕಾಣಿಸುತ್ತಿತ್ತು.
     ಬಂದವರು ತಮ್ಮೊಡನೆ ತಮ್ಮ ಕೈಕಸಬಿನ ವಸ್ತುಗಳನ್ನು ತಂದಿದ್ದರು. ಅವನ್ನು ಕೊಟ್ಟು ತಮಗೆ ಬೇಕಾದ ಸಾಮಗ್ರಿಗಳನ್ನು ಅವರು ಪಡೆಯಬೇಕು. ಜತೆಗೆ, ಕೆಲವರಿಗೆ ಹಸಿವು ಕೆಲವರಿಗೆ ಬಾಯಾರಿಕೆ. ಸ್ವಲ್ಪ ಹೊತ್ತು ಗುಂಪು ಚೆದರಿದರೆ, ಆ ಕೆಲಸವೆಲ್ಲ ಬೇಗ ಬೇಗನೆ ಆಗಬಹುದು ಎನಿಸಿತು ಮೆನೆಪ್‍ಟಾಗೆ.