ಪುಟ:Mrutyunjaya.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೧೫೧

ನೀಲನದಿಯನ್ನು ನಿರ್ಮಿಸಿದ."
ಅಷ್ಟು ಅದೃಷ್ಟವಂತರಲ್ಲದ ಬೇರೆಯವರು ಆಕಾಶದ ಮೋರೆಹೊಗಬೇಕು.
ಭಾಗ್ಯಶಾಲಿಗಳಾದ ಐಗುಪ್ತದ ಜನರಿಗಾದರೋ ನೀಲನದಿಯ ಸತತ ರಕ್ಷೆ.
ತುಂತುರು ವರ್ಷವೂ ಒಮ್ಮೊಮ್ಮೆ ಲಭಿಸುತ್ತಿತ್ತ ಅವರಿಗೆ. ಆಗ
ಜನರು ಮನೆಗಳಿಂದ ಹೊರಬಂದು ಆ ಹನಿಗಳಿಗೆ ಮೈಯೊಡ್ಡುತ್ತಿದ್ದರು;
ನಾಲಗೆ ಚಾಚಿ ಆಕಾಶದ ನೀರಿನ ರುಚಿ ನೋಡುತ್ತಿದ್ದರು.
ನೀರಾನೆ ಪ್ರಾಂತದ ಮುಖ್ಯ ಪಟ್ಟಣದಲ್ಲಿ ಹನಿಮಳೆ ಬಿದ್ದ ಸಂಜೆ
ಅಹೂರಾ ಮಗುವನ್ನೆತ್ತಿಕೊಂಡು ತನ್ನ ಗಂಡನೊಡನೆ ಹಳ್ಳಿಯಿಂದ ಬಂದಳು.
ಹೊರಗಿನಿಂದ ಬಂದವರಿಗೆ ರಾಜಗೃಹದಲ್ಲಿ ವಸತಿ. ಇಪ್ಯುವರ್ ನ
ಆತಿಥ್ಯ.
ಆದರೆ ಅಹೂರಾಳ ವಿಷಯದಲ್ಲಿ ಅದು ಆಗದ ಮಾತು.
"ನಮ್ಮಲ್ಲೇ ಇರಬೇಕು," ಎಂದಳು ನೆಫಿಸ್.
ಮೆನೆಪ್ಟಾನನ್ನು ಉದ್ದೇಶಿಸಿ ಅಹೂರಾ ಅಂದಳು :
"ದೂರು ತಂದಿದ್ದೇನೆ ಅಣ್ಣ."
"ಹೌದೆ? ಅದೇನು?"
"ಒಂದು ಸಿಂಹ ತುಂಬ ಕಾಟ ಕೊಡ್ತಿದೆ. ಆಗಲೇ ನಾಲ್ಕು ಹಸು,
ಹೊರಿ ಹೋದುವು."

"ಮೊದಲ್ನೇದು ಹೋದಾಗಲೇ ತಿಳಿಸ್ಬೇಕಾಗಿತ್ತು."
"ನಿಜ. ಆದರೆ ತಕ್ಷಣ ಹೊರಡೋಕಾಗ್ಲಿಲ್ಲ. ಹಬ್ಬದ ಸಮಯ."
"ಖ್ನೆಮ್ ಗೆ ಹೇಳ್ತೇನೆ."
"ದಳಪತಿಯವರಿಗೆ ಬಹಳ ಜಂಬ. ಕಂದಾಯ ವಸೂಲಿಗೆ ಬಂದಿದ್ದಾಗ,
ಊಟಕ್ಕಿದ್ದು ಹೋಗಿ ಅಂತ ಹೇಳ್ದೆ. ಕೇಳ್ಲೇ ಇಲ್ಲ. ಕೆಲಸ ಮುಗಿಸಿ ನೆರೆ
ಗ್ರಾಮಕ್ಕೆ ಹೊರಟೇ ಹೋದ್ರು."
"ಊಟಕ್ಕೆ ನಿಂತರೆ ತಡವಾಗ್ತದೆ ಅಂದ್ನೇನೊ?"
" ಹೌದು. ,,