ಪುಟ:Mrutyunjaya.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೧೫೫ ಕೆಳಗಡೆಯಿಂದ ಅರ್ಧವೃತ್ತಾಕಾರವಾಗಿ ತೋಪನ್ನು ಬಳಸಬೇಕು. ಸಿಂಹ ನಿದ್ದೆ ಹೋಗಿರಬಹುದು. ಹಳ್ಳಿಗರು ಸದ್ದು ಗದ್ದಲ ಮಾಡಿ ಎಬ್ಬಿಸಬೇಕು, (ಹತ್ತಾರು ತಮಟೆ ತಗಡು, ಬಾರಿಸುವ ಕೋಲು, ಒಂದು ಭೇರಿ, ತಾಳೆಯ ಸೀಳು ತೊಲೆ ಮತ್ತು ಸೆಣಬಿನ ರಜ್ಜು ಅವರ ಬಳಿ ಇದ್ದುವು.) “ನಾನು ಸನ್ನೆ ಮಾಡೋವರೆಗೂ ಸದ್ದು ಕೂಡದು. ಮೌನವಾಗಿ ಬನ್ನಿ,"ಎಂದ ಖ್ನೆಮ್ ಹೊಟೆಪ್. ಪಾದಗಳು ಮರಳಲ್ಲಿ ಹೂತುಹೋಗುತ್ತಿದುವು. ಎತ್ತಿ ಎತ್ತಿ ಅಡಿ ಇಡಬೇಕು. ಸಾಲದುದಕ್ಕೆ, ಚುರುಕು ಮುಟ್ಟಿಸುವ ಕಾದ ಉಸುಬು ಅದು. ದೃಷ್ಟಿ ಹರಿದಂತೆ, ಕುಣಿಯುವ ಕರಿಯ ಮಚ್ಚೆಗಳು ಎದುರಾಗುತ್ತಿದ್ದುವು. ದಿಬ್ಬವನ್ನೇರುವುದಕ್ಕಂತೂ ಖ್ನೆಮ್ ಮತ್ತು ಹತ್ತು ಜನ ಪ್ರಯಾಸ ಪಟ್ಟರು. ಉಳಿದವರು ಕಳ್ಳ ಹೆಜ್ಜೆಗಳನ್ನಿಡುತ್ತ ಕೆಳಗಿನಿಂದ ತೋಪಿನ ಬಳಿ ಸರಿದರು. ಸಿಂಹ ಕೊಳದ ಬಳಿ ಖರ್ಜೂರ ಮರದ ನೆರಳಿನಲ್ಲಿ ಮಲಗಿತ್ತು, ಒಂದೇ. ಹತ್ತಿರದಲ್ಲೇ ಮೂರು ರಾಸುಗಳ ಅವಶೇಷಗಳಿದ್ದುವು. (ಇನ್ನೊಂದು ಹೋರಿಯನ್ನೋ ಹಸುವನ್ನೋ ಬೇರೆ ಸಿಂಹ ಒಯ್ದಿರಬೇಕು.) ನೀಳ ಕೇಸರ. ಈತ ಕುಟುಂಬದ ಯಜಮಾನನೇನೋ. ಔತಣ ಮುಗಿಸಿ ಇತರ ಸಿಂಹಗಳು ಹೊರಟುಹೋಗಿರಬಹುದು ನರವಾಸನೆ ಮೂಗಿಗೆ ತಟ್ಟಿದಾಗ, ಕತ್ತನ್ನು ತುಸು ಚಲಿಸಿ, ಸಿಂಹ ಮತ್ತೆ ಮಲಗಿತು. ಇಳಿಯದ ಮಂಪರು. ಜನ ನಿಂತಲ್ಲಿಂದಲ್ಲೇ ಕೊಳಕ್ಕೂ ಖರ್ಜೂರದ ಮರಗಳಿಗೂ ವಂದಿಸಿದರು. ಖೆಮ್ನ್ ಹೊಟೆಪ್ ಸಂಜ್ಞೆ ಮಾಡಿದೊಡನೆ ಭೇರಿ ಮೊಳಗಿತು,ತಮಟೆ ತಗಡುಗಳು ಭೋರ್ಗರೆದುವು, ನೂರು ಕಂಠಗಳಿಂದ ಕಿರಾತಕೂಗು ಕೇಳಿಸಿತು. ಸಿಂಹ ಎದ್ದು ಬಾಲವನ್ನು ಮೇಲ್ಮೊಗವಾಗಿ ಎತ್ತಿತು. ಗದ್ದಲದ ಮೂಲವಾದ ಅರ್ಧವೃತ್ತದ ಕಡೆಗೆ ತಿರಸ್ಕಾರದಿಂದ ನೋಡಿತು. ಜನರ ಹೇಷಾರವ ಹೆಚ್ಚಿ ದಂತೆ, ಸಿಟ್ಟುಗೊಂಡು ಗರ್ಜಿಸಿತು. ಪಶ್ಚಿಮಕ್ಕೆ ಇಳಿಯತೊಡಗಿದ್ದ ಸೂರ್ಯನನ್ನೊಮ್ಮೆ ಕಣ್ಣುಕಿರಿದು ಗೊಳಿಸಿ ನೋಡಿ, ಮತ್ತೊಮ್ಮೆ ಗರ್ಜಿಸಿ, ಅರ್ಧವೃತ್ತಾಕಾರವಾಗಿ ನಿಂತಿದ್ದ