ಈ ಪುಟವನ್ನು ಪರಿಶೀಲಿಸಲಾಗಿದೆ
೬ ಮೃತ್ಯುಂಜಯ
ಸಹಯಾತ್ರಿಕರನ್ನು ಉದ್ದೇಶಿಸಿ ಅವನೆಂದ: "ರಾ ದೇವರ ರಥ ನೆತ್ತಿಯ ಮೇಲಕ್ಕೆ ಬರೋಹೊತ್ತಿಗೆ ಆ ತಾಳೆಮರಗಳ ನೆರಳಲ್ಲಿ ನಾವು ಸೇರಬೇಕು. ಅಷ್ಟರವರೆಗೆ ಗುಂಪು ಚೆದರಿದರೂ ಚೆದರಬಹುದು.” "ಹಾಗೇ ಆಗಲಿ," ಎಂದರು ಗುಂಪಿನ ಹಲವರು. ದಾರಿ ಏರತೊಡಗಿದಾಗಲೂ ಮುಗಿಯದ ಸಂತೆ. ಕೆಲ ಅಂಗಡಿಗಳ ಮುಂದೆ ಲಿಪಿಕಾರರು ಕುಳಿತಿದ್ದರು. ಲೆಕ್ಕ ಬರೆಯುವವರು. ಒಂದೆರಡು ಕಡೆ ಲಿಪಿಕಾರಾರೇ ವರ್ತಕರು. ಪೆಪೈರಸ್ ಹಾಳೆಯ ಮೇಲೆ ಬರೆದ ಜಾಣ್ನುಡಿಯ ನಾಣ್ನುಡಿಯ ಸುರುಳಿಗಳು ಅವರ ಸರಕು. ದೇವಸೇವಕನೊಬ್ಬ ಜನ್ಮದಿನದ ಆಧಾರದ ಮೇಲೆ ಭವಿಷ್ಯ ನುಡಿಯುತ್ತಿದ್ದ. ಮತ್ತೊಬ್ಬ ದೇವಸೇವಕ ಮಾಂತ್ರಿಕ ವೈದ್ಯ. ಮುಂದಿನವನು ಜಾದುಗಾರ; " ಚಪ್ಪಾಳೆ ತಟ್ಟಿ !” ಎನ್ನುತ್ತಿದ್ದ ನೆರೆದಿದ್ದ ಹುಡುಗರಿಗೆ. ಮತ್ತೂ ಮುಂದಕ್ಕೆ, ಹೆಚ್ಚು ಜನರನ್ನು ಆಕರ್ಷಿಸಿದ್ದ ದೊಂಬರಾಟ. ನೆಫಿಸ್ ಗಂಡನನ್ನು ಕೇಳಿದಳು : " ಸುಮ್ಮನೆ ನೋಡ್ತಾ ಹೋಗೋಣ್ವೋ, ಅಥ್ವಾ....ರಾಮೆರಿಗೆ ಹಸಿವಾಗ್ತಿರಬೌದು." ರಾಮೆರಿಪ್‍ಟಾಗೆ ವರ್ಣರಂಜಿತ ಮಾಯಾನಗರಿಯ ಗುಂಗು. ತಾಯಿಯ ಕೈ ಕೊಸರಿಕೊಂಡು ಮುಂದೆ ಹೋಗುವ ತವಕ. ಆದರೆ ಹೊಟ್ಟೆ ಚುರುಚುರು ಎನ್ನುತ್ತಿತ್ತು. ತಂದೆಯೆಂದ : " ಅವನಿಗಿಷ್ಟು ರೊಟ್ಟಿ ಕೊಡು." ನೆಫಿಸ್ ಬೀದಿಯ ಬದಿಯಲ್ಲಿ ತನ್ನ ತಲೆಯ ಮೇಲಿನ ಗಂಟನ್ನು ಕೆಳಗಿಳಿಸಿ ಬಿಚ್ಚಿದಳು. ಆ ಗಂಟಿನೊಳಗೇನಿದೆ ಎಂದು ತಿಳಿಯುವ ಕುತೂಹಲ ಹತ್ತಿರದ ಅಂಗಡಿಕಾರರಿಗೆ. ಸೆಣಬಿನಲ್ಲಿ ನೆಯ್ದ ಚಿತ್ತಾರ ಬಿಡಿಸಿದ ಚೀಲಗಳು, ಕುಸುರಿ ಕೆಲಸದ ನಡುವಸ್ತ್ರಗಳು, ಪ್ರತ್ಯೇಕವಾಗಿ ಕಟ್ಟಿದ್ದ ಇನ್ನೊಂದು ಗಂಟು, ಜತೆಗೆ ಬುತ್ತಿ....