ಪುಟ:Mrutyunjaya.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೨

ಮೃತ್ಯುಂಜಯ

"ಒಂದು ಮೊಳ ಬುವಿಗಾಗಿ ಆಸೆಬುರುಕನಾಗದಿರು
ವಿಧವೆಯ ಹೊಲಕೆ ಅತಿಕ್ರಮಿಸಿ ನುಗ್ಗದಿರು
ಹೊಲಗಳನ್ನು ಉಳು
ಒಕ್ಕುವ ಕುಟ್ಟುವ ನಿನ್ನ ಅಂಗಳದಿಂದಲೇ
ನಿನಗೆ ಬೇಕಾದ ತಿನಿಸು ಉಣಿಸೆಲ್ಲವನು ನೀ ಪಡೆವೆ
ಅತಿಕ್ರಮಣದಿಂದ ಗಳಿಸುವ ಐದುನೂರು ಬಳ್ಳಕಿಂತ
ದೇವರು ನಿನಗೀವ ಒಂದು ಬಳ್ಳವೆ ಮೇಲು
ಉಗ್ರಾಣದಲ್ಲಿನ ಐಸಿರಿಗಿಂತ
ದೇವರ ಕೈಯಲ್ಲಿ ಬಡತನ ಒಳಿತು
ಸಿರಿವಂತಿಕೆಯ ಸುಖಕಿಂತ ವಾಸಿ
ಬಿಸಿ ಬಿಸಿ ರೊಟ್ಟಿಯ ತುಣುಕು."
ಓದಿ ಆದ ಮೇಲೆ ಇಪ್ಯುವರ್‌ ಒಬ್ಬೊಬ್ಬರಾಗಿ ಹುಡುಗರನ್ನು ಕರೆದು,
ಚಿತ್ರಲಿಪಿಯನ್ನು ನೋಡಿ ಪದಗಳನ್ನು ಗುರುತಿಸಲು ಹೇಳುತ್ತಿದ್ದ.
ರಾಮೆರಿಪ್ಟಾ ಜಾಣ ಹುಡುಗ. ಅವನ ಸರದಿ ಯಾವಾಗಲೂ
ಕೊನೆಗೆ.
ಇಪ್ಯುವರ್‌ ಮುಂದುವರಿಯುತ್ತಿದ್ದ :
"ಸಾಯುವುದಕ್ಕೆ ಮುಂಚೆ ರೈತ ತನ್ನ ಮಗನಿಗೆ ಹೇಳುವ ಕಿವಿಮಾತು
ಯಾವುದು ? 'ನಿನ್ನ ಹೊಲದಿಂದ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಫಸಲು
ಪಡೆ; ಅತ್ಯಂತ ಶ್ರಮ ಪಡು. ಕೆಲಸದಲ್ಲಿ ಮೂಗು ನೆಟ್ಟು ನೆಲವನ್ನು
ಉಳು'."
ಬದುಕಿನ ಅನಂತರದ ಸಮಸ್ಯೆ ಅರ್ಥಮಾಡಿಕೊಳ್ಳಲು ಕಷ್ಟ. ಆದರೂ
ಎಲ್ಲ ಎಳೆಯರೂ ಕಲಿಯಲೇಬೇಕಾದ ಸಂಗತಿಯಿದು.
"ಐಹಿಕ ಸುಖದ ಕಾಲಾವಧಿ ಒಂದು ಕನಸು. ಆದರೆ, ಪಶ್ಚಿಮವನ್ನು
ತಲಪಿದವನಿಗೆ ಸುಸ್ವಾಗತ ಕಾದಿರುತ್ತದೆ."
ಅರ್ಥವಾಗಲೆಂದು ವಿವರಣೆಯನ್ನೂ ಆತ ನೀಡುತ್ತಿದ್ದ :