ಪುಟ:Mrutyunjaya.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೦೮

ಮೃತ್ಯುಂಜಯ

ಮೆನೆಪ್ಟಾ ಕೇಳಿದ:
"ನಾಳೆ ನೀವೂ ಬರ್ತೀರಿ, ಅಲ್ಲವಾ?"
"ಗೊತ್ತಿಲ್ಲ. ಸಂಜೆಯೊಳಗಾಗಿ ಸೂಚನೆ ಬರದಿದ್ದರೆ ಲಿಷ್ಟ್ ಗೆ
ಹೊರಟು ಹೋಗ್ತೇನೆ. 'ಅರಮನೆಯ ರಸಗವಳಕ್ಕಿಂತ ಮೇಲು ಮಡದಿ
ತಟ್ಟಿದ ಬಿಸಿರೊಟ್ಟಿ!' ತಮಾಷೆಗೆ ಹೇಳ್ದೆ. ನಮ್ಮ ಮನೆಯಲ್ಲೂ ರೊಟ್ಟಿ
ತಟ್ಟೋದು ದಾಸಿಯರೇ ಅನ್ನಿ."
ಔಪಚಾರಿಕವಾಗಿ ಮೆನೆಪ್ಟಾ ನಕ್ಕ.
"ಹೋಗಿ ಬನ್ನಿ."
"ದೋಣಿಯಿಂದ ತರಿಸಬೇಕಾದ್ದು ಏನಾದರೂ ಉಂಟೆ?"
"ಉಂಟು."
"ಎಷ್ಟು ಕತ್ತೆ ಬೇಕು?"
"ಪೆಟಾರಿ, ಬಟ್ಟೆ ಬರೆ....ಒಂದು ಸಾಕು."
"ಕಾವಲು ಭಟರಿಗೂ ಆಳುಗಳಿಗೂ ಹೇಳ್ತೇನೆ...."
"ಜೊತೆಗೆ ಬಟಾ ಹೋಗ್ತಾನೆ."
ಗೇಬು ನಸುನಗೆ ಸೂಸಿದ.
"ಹ್ಞ. ಬಟಾ! ನೀರಾನೆ ಪ್ರಾಂತದ ಸಾರಿಗೆ ವ್ಯವಸ್ಥೆಯ
ಮುಖ್ಯಸ್ಥ !"
ತಮ್ಮ ಮಾತುಗಳಿಗೆ ಕಿವಿಗೊಡುತ್ತ ಅಲ್ಲಿಯೇ ಹೊರಗೆ ಹೂದೋಟದಲ್ಲಿ
ಔಟ, ಬೆಕ್ ರೊಡನೆ ನಿಂತಿದ್ದ ಬಟಾನ ಮೇಲೆ ಅವನ ದೃಷ್ಟಿ ಬಿತ್ತು.
ಗೇಬು ಹೋದ ಬಳಿಕ ಆ ಮೂವರೂ ಒಳಗೆ ಬಂದರು.
"ಹೊರಗೆ ಹೋಗೀಪ್ಪಾ ಬೇಕಾದಾಗ ಕರೀತೇವೆ," ಎಂದ ಬಟಾ,
ರಾಜಸೇವಕರಿಗೆ ಹತ್ತಿರದ ಕೊಠಡಿಯನ್ನು ಹೊಕ್ಕೊಡನೆ ದುಗುಡ ತುಂಬಿದ
ಧ್ವನಿಯಲ್ಲಿ ಬಟಾ ಅಂದ:
"ಅಣ್ಣ, ಎರಡು ವಿಷಯ ನನಗೆ ಸ್ಪಷ್ಟವಾಗಲಿಲ್ಲ. ಮೊದಲ್ನೇದು
ನಾವಿಲ್ಲಿಗೆ ಬಂದದ್ದು ಸ್ವಇಚ್ಛೆಯಿಂದಲೋ, ಇನ್ನೊಬ್ಬರ ಒತ್ತಾಯಕ್ಕೊ?"
"ನಿನಗೆ ಗೊತ್ತಿದೆಯಲ್ಲ ಬಟಾ. ಸ್ವಂತ ಇಚ್ಛೆಯಿಂದಲೇ."