ಪುಟ:Mrutyunjaya.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಮೃತ್ಯುಂಜಯ ಮಂತ್ರಿ....... ಇವಲ್ಲದೆ, ಪ್ರಾಂತದ ಗಡಿಗಳನ್ನು ಅವನು ನಿರ್ಧರಿಸಬೇಕು ; ಭೂಮಿಯನ್ನು ಹಂಚಬೇಕು ; ಕಂದಾಯ ಬಾಕಿಯನ್ನು ವಸೂಲು ಮಾಡಬೇಕು ; ಕಳ್ಳತನಗಳಾಗದಂತೆ ನೋಡಿಕೊಳ್ಳಬೇಕು ; ಪ್ರಾಂತಪಾಲರ ದೂರುಗಳನ್ನು ಗಮನಿಸಬೇಕು....... ದೇವಮಂದಿರದಿಂದ ಪೆರೋ ಹಿಂತಿರುಗುವ ವೇಳೆಗೆ ಅಮಾತ್ಯ ಪಲ್ಲಕಿಯಿಂದ ಇಳಿದು ಬಂದು ಅರಮನೆಯ ಸಭಾಭವನದಲ್ಲಿ ಕಾದಿರುತ್ತಿದ್ದ. ಪೆರೋಗೆ ಬಾಗಿ ನಮಿಸಿ ಆತ ಹೇಳುತ್ತಿದ್ದ: " ನಿಮ್ಮ ವ್ಯವಹಾರಗಳೆಲ್ಲ ಸುಭದ್ರವಾಗಿವೆ ; ನಿಮ್ಮ ಸಂಪತ್ತು ಹೆಚ್ಚಿದೆ ; ಪ್ರತಿಯೊಬ್ಬ ಹೊಣೆಗಾರ ಅಧಿಕಾರಿಯೂ 'ನಿಮ್ಮ ವ್ಯವಹಾರಗಳೆಲ್ಲ ಸುಭದ್ರವಾಗಿವೆ. ನಿಮ್ಮ ಸಂಪತ್ತು ಹೆಚ್ಚಿದೆ' ಅಂತ ವರದಿ ಮಾಡಿದ್ದಾನೆ." ಮುಂದೆ ಮಹತ್ವದ ವಿಷಯಗಳೇನಾದರೂ ಇದ್ದ ದಿವಸ ಕೊಂಚ ಹೊತ್ತು ಮಾತುಕತೆ. 'ಪೆರೋನಿಂದ ನಿರ್ದೇಶ ನೀಡಿಕೆ' ಎಂದು ಔಪಚಾರಿಕವಾಗಿ ಎನ್ನುವುದು ಇದಕ್ಕೇ....' (ಈ ದಿನ ಅಮಾತ್ಯ ತುಸು ಕಾಯಬೇಕಾಯಿತು. ಪೆರೋ ನುಡಿದ: "ನಾವು ಏಳುವುದು ತಡವಾಯಿತು. ಮಹಾ ಅರ್ಚಕರದೇ ಯೋಚನೆಯಾಗಿ ನಿದ್ದೆ ಸರಿಯಾಗಿ ಬರಲಿಲ್ಲ. ನಾಯಕ ಏನಂತೆ?" “ ಈಗ ಭೇಟಿಗೆ ಕರೆದಿದ್ದೇನೆ. ಮಹತ್ವದ್ದೇನಾದರೂ ಇದ್ದರೆ ತಿಳಿಸಿ ಹೋಗ್ತೇನೆ.” "ಅತಿಥಿಗೃಹದ ಅಧಿಕಾರಿಯ ಪ್ರಕಾರ ಇವನು ತೀರಾ ಸಾಮಾನ್ಯ ಮನುಷ್ಯ" "ನೋಟಕ್ಕೆ ಹಾಗಿದ್ದಾನೆ. ಇದನ್ನು ಕೆಫ್ಟು ಆ ದಿನವೇ ಹೇಳ್ಲಿಲ್ಲವೆ? ಇವನು ಜನಸಾಮಾನ್ಯರ ನಾಯಕ." "ನಿಮ್ಮ ಸ್ಪರ್ಶದಿಂದ ಅವನು ಮಣ್ಣಾಗ್ತಾನೋ ಬಂಗಾರವಾಗ್ತಾನೋ ನೋಡೋಣ." ಅಮಾತ್ಯ ಏನನ್ನೂ ಹೇಳಲಿಲ್ಲ, ಪೆರೋ ಅಂಗೈ ಬೇಸುವುದನ್ನೇ ಅವನು ಕಾಯುತ್ತಿದ್ದ. ಆ ಸಂಜ್ಞೆ ಕಂಡೊಡನೆ ಅವನು ಪೆರೋಗೆ ನಮಿಸಿದ.