ಪುಟ:Mrutyunjaya.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೨೭ ಪೆರೋ ಒಳಹೋಗಲು ಹೊರಳಿದೊಡನೆಯೇ ಅಮಾತ್ಯ ತನ್ನ ಭವನದತ್ತ ಸಾಗಿದ.) ಮತ್ತೊಬ್ಬ ಸೇವಕ ಓಡಿಬಂದು, "ಅಮಾತ್ಯರು ಬಂದ್ರು," ಎಂದ; ಆ ಆಗಮನವನ್ನು ಸೂಚಿಸಲೆಂದು, ಬಾಗಿಲ ಬಳಿ ತೂಗಹಾಕಿದ್ದ ಕಂಚಿನ ಜಾಗಟೆಯನ್ನು ತುದಿಗೆ ತೊಗಲು ಸುತ್ತಿದ್ದ ಕೋಲಿನಿಂದ ಹೊಡೆದು, ಢಣ್ ಎನಿಸಿದ. ವೇದಿಕೆಯತ್ತ ಮುಖ ಮಾಡಿ ನಿಂತಿದ್ದ ಸೆನೆಬ್ ಮತ್ತು ಮೆನೆಪ್ ಟಾ ಬಾಗಿಲ ಕಡೆ ತಿರುಗಿದರು. ಅರಮನೆಯಿಂದ ಅಲ್ಲಿಗೆ ಕೆಲವೇ ಹೆಜ್ಜೆಗಳ ಶೀಘ್ರನಡಿಗೆ. ಹೊಸ್ತಿಲು ದಾಟಿ ಒಳಗೆ ಬಂದದು, ಇಳಿಹರೆಯದಲ್ಲೂ ಚಲನೆ ದೃಢವಾಗಿದ್ದ ನೀಳಶರೀರ. ಗೋದಿಗೆಂಪು ಮೈಬಣ್ಣ. ಬೈತಲೆ ತೆಗೆದು ಎರಡು ಪಕ್ಕಗಳಿಗೂ ಹಿಂದಕ್ಕೂ ಕತ್ತಿನ ತನಕ ಬಾಚಿ ಇಳಿಬಿಟ್ಟಿದ್ದ ಅರ್ಧಕ್ಕರ್ಧ ನರೆತ ತಲೆಗೂದಲು. ಅವನ ಕತ್ತನ್ನೂ ಎದೆಯನ್ನೂ ಅಲಂಕರಿಸಿದ್ದುವು ಬಗೆಬಗೆಯ ಅಮೂಲ್ಯ ಹರಳುಗಳನ್ನು ಇರಿಸಿ ಮಾಡಿದ್ದ ಬಂಗಾರದ ಸರಗಳು. ಮೊಣಕಾಲಿನವರೆಗೂ ನಡುವನ್ನು ಆವರಿಸಿತ್ತು ಉತ್ತಮ ವಸ್ತ್ರ; ಬೆಳ್ಳಿಯ ನಡುಪಟ್ಟಿ. ಬೆರಳಲ್ಲಿ ಸ್ವರ್ಣದ ಮುದ್ರಾ ಉಂಗುರ. ಮುಖಕ್ಷಾರ ಮಾಡಿಸಿಕೊಂಡಿದ್ದುದರಿಂದ ಗಲ್ಲ ತುಟಿಗಳು ನುಣುಪಾಗಿದ್ದುವು. ಪಾದಗಳಿಗೆ ಮೃದು ತೊಗಲಿನ ರಕ್ಷೆ. ಬಲಗೈಯಲ್ಲಿ ನೀಳ ಅಧಿಕಾರ ದಂಡ - ಅಮಾತ್ಯ ಲಾಂಛನ. ಆಮೆರಬ್ ನನ್ನು ಕಂಡೊಡನೆ ಮೆನೆಪ್ ಟಾ ತನ್ನ ಮಗ್ಗುಲಿಗೆ ದೃಷ್ಟಿ ಹಾಯಿಸಿದ. ಅಲ್ಲಿರಲಿಲ್ಲ ಲಿಪಿಕಾರ. ತನ್ನೊಬ್ಬನನ್ನೇ ವಿಶಾಲ ಭವನದ ಮಧ್ಯದಲ್ಲಿ ನಗ್ನನಾಗಿ ನಿಲ್ಲಿಸಿದ್ದಾರೆ ಎನಿಸಿತು ಮೆನೆಪ್ ಟಾಗೆ. ಆತ ತಬ್ಬಿಬ್ಬಾದ. ಆದರೂ ಮಂದಹಾಸ ಸೂಸಿ ತನ್ನೆಡೆ ಬರುತ್ತಿದ್ದ ವ್ಯಕ್ತಿಗೆ ನಮಿಸಿದ. ಒಳಬಂದೊಡನೆಯೇ ಲಿಪಿಕಾರನ ಪಕ್ಕದಲ್ಲಿದ್ದಾತನನ್ನು ಆಮೆರಬ್ ನೋಡಿದ. ಪೆರೋಗೆ ಈತನ ಮೈತ್ರಿ ಬೇಕು. ಐಗುಪ್ತದ ಐಕ್ಯಕ್ಕೆ, ಭದ್ರತೆಗೆ, ನೆಮ್ಮದಿಗೆ ಅದು ಅಗತ್ಯ. ಸಜ್ಜನನಂತೆ ತೋರುವ ಈ ವ್ಯಕ್ತಿಯಿಂದ ಅದನ್ನು ಪಡೆಯುವುದು ಕಷ್ಷವೆ? ನಮಿಸುತ್ತಿದ್ದವನ ಹತ್ತಿರ ಸಮೀಪಿಸಿದೊಡನೆ ಆಮೆರಬ್ ನಿಂತ. ತನ್ನ