ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೬೦ ಮೃತ್ಯುಂಜಯ
ಬಾರಿ ಸ್ನಾನ ಮಾಡಿದರೇನು ಫಲ ? ಎಷ್ಟು ಸಾರಿ ಸುಗಂಧದ್ರವ್ಯ ಪೂಸಿ ಕೊಂಡರೇನು ಲಾಭ?” ಮೆನೆಪ್ ಟಾ ನಿಟ್ಟುಸಿರು ಬಿಟ್ಟ. ಬಟಾ ತಲೆ ಎತ್ತಿ, ಮರಗಳ ತುದಿ ಯಲ್ಲಿದ್ದ ಗಾಳಿಯನ್ನು ಮೂಸಲೆತ್ನಿಸಿದ. ಉಳಿದವರು ತುಟಿಗಳನ್ನು ಬಿಗಿಯಾಗಿ ಒತ್ತಿ ಶೂನ್ಯ ನೋಟ ಬೀರಿದರು. ಇದ್ದಕ್ಕಿದ್ದಂತೆ ಮೆನ್ನ ತಗ್ಗಿದ ಧ್ವನಿಯಲ್ಲಿ ಅಂದ: "ಅಗೋ ಅರಮನೆಯ ಸಶಸ್ತ್ರ ಪಡೆಯ ಒಬ್ಬ ಭಟ ದೂರದಲ್ಲಿ ಬರ್ತಿದ್ದಾನೆ. ನಿಮ್ಮನ್ನು ಹುಡುಕ್ತಿರಬೇಕು. ನೀವು ಎದ್ದು ಅವನ ಕಡೆಗೆ ನಡೀತಾ ಇರಿ. ನಾನು ಈ ದಿಕ್ಕಿನಲ್ಲಿ ಮಾಯವಾಗ್ತೇನೆ. ಪುನಃ ಹುಚ್ಚ ಮೆನ್ನನೂ ನೀವೂ ಒಟ್ಟಿಗೆ ಮಾತಾಡ್ತಾ ಇದ್ದಿರಿ ಅಂತ ಇನೇನಿಗೆ ಗೊತ್ತಾದ್ರೆ; ನಿಮ್ಮ ಮೇಲೆ ದ್ವೇಷ ಸಾಧಿಸ್ತಾರೆ.” ಅವರೆಲ್ಲ ಎದ್ದರು. ಭಟ ದೂರದಲ್ಲಿದ್ದ,-ಬಹಳ ದೂರದಲ್ಲಿದ್ದ. ಅಸ್ಪಷ್ಟ ಆಕೃತಿ ಮಾತ್ರ. ಆದರೂ ಮೆನ್ನ ಅವನ ಗುರುತು ಹಿಡಿದಿದ್ದ. ಮೆನ್ನ ಅಂಬೆಗಾಲಿನಲ್ಲಿ ದೂರ ಸರಿದು ಪೊದೆಗಳಲ್ಲಿ ಮರೆಯಾಗುತ್ತಿದ್ದಂತೆ, ಮೆನೆಪ್ ಟಾನೂ ಸಂಗಡಿಗರೂ ಉದ್ಯಾನದ ಹೆಬ್ಬಾಗಿಲಿನ ದಿಕ್ಕಿಗೆ ನಡೆಯುತ್ತ ಹೋದರು. ಇವರು ಕಣ್ಣಿ ಗೆ ಬಿದ್ದೊಡನೆ ಭಟ ವೇಗದ ಹೆಜ್ಜೆಗಳನ್ನಿಡುತ್ತ , ಏದುಸಿರು ಬಿಡುತ್ತ, ಬಂದ. ಕೈಯಲ್ಲೊಂದು ಈಟಿ ಇತ್ತು, ತುಸು ದೂರದಿಂದಲೇ ಮೆನೆಪ್ ಟಾಗೆ ಆತ ನಮಿಸಿದ, ಬಳಿಕ ಮಂದಗತಿಯಿಂದ ನಡೆದು, ಅವರನ್ನು ಸಮೀಪಿಸಿ. ನಿಂತ.ಇವರೂ ನಿಲ್ಲಬೇಕಾಯಿತು. ಬಟಾ ಕೇಳಿದ: “ಏನಪ್ಪ?” “ನೀವು ಅರಮನೇಲಿ ಇಲ್ಲಾಂತ ಹಾಹಾಕಾರ ಎದ್ದಿದೆ. ಅಮಾತ್ಯರಿಗೂ ದೂರು ಹೋಗಿ ಅವರು ಸಿಟ್ಟು ಮಾಡ್ಕೊಂದ್ರು. ದಳಪತೀನ ಕರೆಸಿ ಹುಡುಕಿಕೊಂಡು ಬರೋದಕ್ಕೆ ಆಜ್ಞೆ ಕೊಟ್ರು. ನೂರು ಜನ ಹೊರಟಿದ್ದಾರೆ. ನನಗೆ ಸಿಕ್ಕಿದ್ರಿ. ನಾನು ಭಾಗ್ಯಶಾಲಿ !” “ನಿಮಗೆ ಉಡುಗೊರೆ ಕೊಡಬೌದು, ಅಲ್ಲವಾ?”