ಪುಟ:Mrutyunjaya.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೧೭

ಹುಡುಗ ತುಸು ನಿಧಾನವಾಗಿ ಪುನಃ ಆರಂಭಿಸಿದ :
"ನನ್ನ ಯಜಮಾನರು ಎಂಥ ಕಾಯಿಲೆ ಇದ್ರೂ...."
ಕೆಳಗಡೆಯಿಂದ ತುತೂರಿಯ ಧ್ವನಿ. 'ವಾಸಿ ಮಾಡ್ತಾರೆ' ಎಂದು
ಸಾರಲು ಹುಡುಗ ತೆರೆದಿದ್ದ ಬಾಯಿ ಹಾಗೆಯೇ ನಿಂತಿತು.
ಕೈಯಲ್ಲಿ ಚಾಟಿ ಹಿಡಿದ ದಪ್ಪ ತುಟಿಯ ಕಪ್ಪು ಮೈಯ ಕಟ್ಟಾಳು
ಗಳ ತಂಡ ಮಂದಗತಿಯಲ್ಲಿ ಓಡುತ್ತ ಬಂತು. ಅವರು ಅಬ್ಬರಿಸುತ್ತಿದ್ದರು :
"ಪೆರೋ ಬರ್ತಿದ್ದಾರೆ! ಬದಿಗೆ ಸರೀರಿ ! ಬದಿಗೆ ಸರೀರಿ!"
ಎಡಕ್ಕೂ ಬಲಕ್ಕೂ ಚಾಟಿಗಳು ಸುಂಯ್ಗುಟ್ಟಿದುವು. ಮೆನೆಪ್ಟಾ
ಕತ್ತು ಹೊರಳಿಸಿ ಅತ್ತ ನೋಡಿದ. ಕರಡಿಯನ್ನು ಎಳೆದುಕೊಂಡು ದೂರ
ಹೋಗುತ್ತಿದ್ದ ನರ್ತಕಿಯ ನಗ್ನ ಹಿಮ್ಮೈ ಕಾಣಿಸಿತು. ಚಾಟಿಯ ಏಟು
ಬಿದ್ದವರು ತಮ್ಮ ರೋದನ ಕೇಳಿಸಬಾರದೆಂದು ಬಾಯಿಗೆ ಕೈ ಅಡ್ಡ ಹಿಡಿ
ದಿದ್ದರು.
".....ಬದೀಗೆ ಸರೀರಿ !"
ಮೆನೆಪ್ಟಾನ ಹತ್ತಿರದಲ್ಲೇ ಚಾಟಿ ಸುಂಯ್ ಎಂದಿತು. ಆತ ಮಗ
ನನ್ನು ತನ್ನೆಡೆಗೆ ಎಳೆದುಕೊಂಡ ; ಮಡದಿಯ ರಕ್ಷಣೆಗಾಗಿ ತೋಳು ಚಾಚಿದ.
ನಡುವನ್ನು ಹಿಂದಕ್ಕೆ ಬಾಗಿಸದೆ ಇದ್ದಿದ್ದರೆ ಚಾಟಿಯ ಸ್ಪರ್ಶ ಅವನಿಗೂ
ಆಗುತ್ತಿತ್ತು.
"ಪೆರೋ ಪೆರೋ," ಎಂದು ತೊದಲಿದಳು ನೆಫಿಸ್
ರಾಮೆರಿಪ್ಟಾ ತಂದೆಯ ಮಗ್ಗುಲಿನಿಂದ ಇಣಿಕಿ ನೋಡಿದ.
ಕರಿಯ ಭಟರನ್ನು ಹಿಂಬಾಲಿಸಿ ಬಂದರು, ತುತೂರಿಯವರು. ಅವರ
ಬೆನ್ನ ಹಿಂದಿದ್ದರು ಗದಾಧಾರಿಗಳಾದ ನೂರು ಜನ ಅಂಗರಕ್ಷಕರು. ಅವರ
ಹಿಂದೆ, ಐಗುಪ್ತ ರಾಷ್ಟ್ರದ ಅರಸನ ಪೀಠ ಪಲ್ಲಕಿ. ಎಡ ಮಗ್ಗುಲಲ್ಲಿ ಅಂಗ
ರಕ್ಷಕರ ಮುಖ್ಯಸ್ಥ . ಬಂಗಾರದ ತಗಡು ಹೊದೆಸಿದ್ದ ಅಮೂಲ್ಯ ಹರಳು
ಗಳನ್ನು ಕೂರಿಸಿದ್ದ ಸಿಂಹಾಸನದಂಥ ಪೀಠ. ಆ ಪೀಠವನ್ನು ಎತ್ತಿಹಿಡಿಯಲು
ಎಡ ಬಲಗಳಲ್ಲಿ, ಪೀಠದಡಿಯಿಂದ ಹಿಂದಕ್ಕೂ ಮುಂದಕ್ಕೂ ನೀಳವಾಗಿ
ಚಾಚಿದ್ದ ಮರದ ಹಿಡಿಗಳು. ಆ ಹಿಡಿಗಳಿಗೆ ವರ್ಣಲೇಪನ. ಮೇಲ್ಗಡೆ ಬಟ್ಟೆ
ಛಾವಣಿ. ಪಲ್ಲಕಿಯನ್ನು ಹೊರಲು ಮುಂದುಗಡೆ ಮೂವರು ಮೂವರು,