ಪುಟ:Mrutyunjaya.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೨೬೭

    ಬಟಾ ಆಂದ: “ಇವತ್ತು ಅರ್ಚಕನ ಅದೃಷ್ಟವೋ ಅದೃಷ್ಟ! ಜೋಡಿ ಗಿರಾಕಿಗಳು!"
    “ಸದ್ಯಃ ಜ್ವರಗಿರ ಬರೋದು ಬೇಡ," ಎಂದ ಮೆನೆಪ್ ಟಾ.
    ಅರಸ ದೇವಮಂದಿರಕ್ಕೆ ಬಂದು ಹೋದುದನ್ನು ಅರಿತುಕೊಂಡು, ಔಟ ಮತ್ತು ಬೆಕ್ ಅರ್ಚಕನಲ್ಲಿಗೆ ಹೊರಟರು. ಬಟಾ ಮೆನೆಪ್ ಟಾನ బళి ನಿಂತ. ನಾಯಕ ತನ್ನ ಅಂಗರಕ್ಷಕರಿಗೆ ಹೇಳಿದ:
   “ಅರ್ಚಕರಿಗೆ ಕಾಣಿಕೆ ಏನು ಬೇಕೂಂತ ಕೇಳ್ಕೊಂಡು ಬನ್ನಿ. ಕೊಡೋಣ."
    ಔಟ ಮತ್ತು ಬೆಕ್ ದೇವಮಂದಿರಕ್ಕೆ ಬಂದಾಗ ಗರ್ಭಗುಡಿ ಮುಚ್ಚಿತ್ತು. ಅವರು ಹೊರಗಿನಿಂದಲೇ ದೇವರಿಗೆ ನಮಿಸಿದರು.
    ಮಂದಿರ ಶಾಲೆಯಲ್ಲಿ ಕಿರಿಯರಿಗಾಗಿ ಪಾಠಪ್ರವಚನಗಳು ನಡೆದಿದ್ದವು. ಅಲ್ಲಿದ್ದ ಕಿರಿಯ ದೇವಸೇವಕ ಔಟ-ಬೆಕ್ ರನ್ನು ಕಂಡು, "ಔಷಧಿ ಅರ್ಚಕರ ಮನೇಲಿ. ಆ ಕಡೆಗೆ," ಎಂದ.
    ಅರ್ಚಕನ ವಸತಿಯ ಪಡಸಾಲೆಯಲ್ಲಿ ಒಬ್ಬಳು ಯುವತಿ ಸೆಣಬಿನ ಬಟ್ಟೆಗಳ ಕೊಳಕು ಮೆತ್ತೆಯಲ್ಲಿ ಒಂದು ಎಳೆಯ ಹಸುಳೆಯನ್ನು ತನ್ನ ತೊಡೆಗಳಿಗೆ ಅಡ್ಡವಾಗಿ ಮಲಗಿಸಿಕೊಂಡು, ಕುಳಿತಿದ್ದಳು. ಬೇರೆ ಯಾರೂ ಅಲ್ಲಿ ಕಾಣಿಸಲಿಲ್ಲ.
   “ಅರ್ಚಕರು ಇದ್ದಾರಾ?” ಎಂದು ಔಟ ಕೇಳಿದ, ನೋವಿನ ಗೊಗ್ಗರ ಗಂಟಲಲ್ಲಿ.
   ಆಕೆ ತಲೆ ಆಡಿಸಿ ತಗ್ಗಿದ ಸ್ವರದಲ್ಲಿ "ಇದ್ದಾರೆ" ಎಂದಳು.
   ವ್ಯಥೆಗೆ ಈಡಾಗಿದ್ದ ಮುಖ. ಆದರೂ ಸೌಂದರ್ಯಾ ಬೆಕ್ ನನ್ನು ಕುಕ್ಕಿತು. ಆತ ಕೇಳಿದ:
   “ಮಗೂಗೆ ಏನಾಗಿದೆ?”
   ಒಂದೇ ಸಮನೆ ಅವಳೆಂದಳು:
   “ಚೊಚ್ಚಲು ಮಗು. ಗಂಡು. ನಾಲ್ಕು ತಿಂಗಳಾಗಿದೆ. ಐದಾರು ದಿವಸದಿಂದ ಜ್ವರ. ಬಿಟ್ಟೇ ಇಲ್ಲ. ಅಯ್ಯನವರು ಮಂತ್ರ ಹಾಕ್ತೇನೆ ಅಂದಿದ್ದಾರೆ."