ಪುಟ:Mrutyunjaya.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೮

ಮೃತ್ಯುಂಜಯ

ಹಿಂದೆ ಮೂವರು ಮೂವರು ಬೋಯಿಗಳು. ಎಡ ಬಲಗಳಲ್ಲಿ ಚಾಮರ
ಸೇವೆಯವರು. ಆ ಪೀಠದ ಮೇಲೆ ವಿರಾಜಮಾನನಾಗಿದ್ದ, ಅಧಿಕಾರ ಬಲ
ವೈಭವಗಳೆಲ್ಲ ಮೂರ್ತೀಭವಿಸಿದ್ದ ಪೆರೋ.
ಮೆನೆಪ್ಟಾ ಕೇಳಿ ಬಲ್ಲ: ಪೆರೋನ ಪಲ್ಲಕಿಯನ್ನು ಸಾಮಾನ್ಯವಾಗಿ ಹೊರು
ವವರು ಯಾರಾದರೂ ಹನ್ನೆರಡುಜನ ಪಾಳೆಯಗಾರರು. ಹಾಗೆ ಹೊರುವ ಅವ
ಕಾಶ ದೊರೆತವರು ಪೆರೋನ ಸವಿ ಸಾನ್ನಿಧ್ಯ ಲಭಿಸಿದವರು, ಅದೃಷ್ಟವಂತರು
ಎಂದು ಲೆಕ್ಕ. ಪೆರೋನ ಭವ್ಯ ರೂಪವನ್ನು ನೋಡಿದ ಮೆನೆಪ್ಟಾನ ದೃಷ್ಟಿ
ಪಲ್ಲಕಿ ಹೊತ್ತವರತ್ತ ಹೊರಳಿತು. ತಲೆಯನ್ನು ಹಾದು, ಕತ್ತನ್ನು ಬಳಸಿ, ವಕ್ಷ
ಸ್ಥಲದ ಮೇಲೆ ತೂಗಾಡುತ್ತಿದ್ದ ಸೆಣಬಿನ ಸೊಗಸಾದ ನುಣುಪು ವಸ್ತ್ರ. ನಡು
ವಸ್ತ್ರವೂ ಶ್ರೇಷ್ಠಮಟ್ಟದ್ದು .ಅವರು ತಾಳೆಮರದ ಮೃದು ತೊಗಟೆಯ
ಪಾದರಕ್ಷೆಗಳನ್ನು ತೊಟ್ಟಿದ್ದರು. ಸ್ವತಃ ಪಲ್ಲಕಿಯಲ್ಲಿ ಕುಳಿತು ದಾಸಜನರಿಂದ
ಹೊರಿಸಿಕೊಳ್ಳುವ ಜನ. ಈಗ ಪೆರೋನ ಭಾರವನ್ನು___ಅದೂ ಏರುದಾರಿ
ಯಲ್ಲಿ___ತಾವು ಹೊರುತ್ತ, ಆ ಆಢ್ಯರು ತುಸು ದಣಿದಿದ್ದರು. ಮೈಯಿಂದ
ಬೆವರಿಳಿಯುತ್ತಿತ್ತು. ಅವರೆಲ್ಲರ ರೂಪವು ಒಂದೇ ಎನಿಸಿತು ಮೆನೆಪ್ಟಾಗೆ.
ಆದರೂ ಬಲಬದಿಯ ಹಿಂದಿನ ಸಾಲಿನಲ್ಲಿ ಪರಿಚಿತ ಮುಖವನ್ನು ಕಂಡಂತಾ
ಯಿತು, ಎರಡನೆಯವನು___ಎಲಾ ! ಆತ ನೀರಾನೆ ಪ್ರಾಂತದ ಪ್ರಮುಖ
ಭೂಮಾಲಿಕ ನುಟ್ ನೋಸ್. ಮಹಾ ದರ್ಪಿಷ್ಟ. ಅದೃಷ್ಟವಂತರ ಶ್ರೇಣಿಗೆ
ಸೇರಿಬಿಟ್ಟಿದ್ದ !
ತಾನು ಕಂಡುಹಿಡಿದುದನ್ನು ಹೆಂಡತಿಗೆ ಹೇಳಬೇಕೆಂದು ಮೆನೆಪ್ಟಾ
ಅವಳತ್ತ ತಿರುಗಿದ.
ಮಾರ್ಗದ ಇಕ್ಕೆಲಗಳ ಜನರೂ ಬಾಗಿ ವಂದಿಸುತ್ತಿದ್ದರು, ಪೆರೋಗೆ.
ನೆಫಿಸ್ ಕೂಡಾ.ಮೆನೆಪ್ಟಾ ಕಕ್ಕಾವಿಕ್ಕಿಯಾದ. ತಕ್ಷಣವೇ ತಾನೂ
ನಮಿಸಿದ.
ಜನಸಮುದಾಯವೆಲ್ಲ ತನ್ನ ಪಾದಗಳಿಗೆ ಮಣಿಯುವಂತೆ ಮಾಡುವ
ಭವ್ಯರೂಪ ಪೆರೋನದು. ಆತ ಮೆಟ್ಟಿದ್ದುದು ಬಂಗಾರದ ಪಾದರಕ್ಷೆಗಳನ್ನು.
ಭುಜಗಳ ಮೇಲೆ ಇಳಿಬಿಟ್ಟಿತ್ತು, ಕಸೂತಿ ಅಂಚಿನ ಶಿರವಸ್ತ್ರ. ಅದರ
ಮೇಲ್ಗಡೆ, ಐಗುಪ್ತ ದೇಶದ ಉತ್ತರ ದಕ್ಷಿಣ ಭಾಗಗಳ ಒಡೆತನವನ್ನು