ಪುಟ:Mrutyunjaya.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೨೮೭

“ಅಣ್ಣ, ಗಹನ ವಿಷಯಗಳು ಈ ಮಂಡೆಯೊಳಗೆ ಹೋಗೋದಿಲ್ಲ.
ಇನ್ನು ಎಷ್ಟು ದಿವಸ ಇಲ್ಲಿರಬೇಕು? ಅದನ್ನು ಹೇಳಿಬಿಡು. ಮೆನ್ನ ಆ ಹಾಡು
ಬಿಟ್ಟ. ಅವನಿಗೆ ಅದು ಬೇಡವಾದ್ಮೇಲೆ, ನಾನೂ ಕೊಳಲಲ್ಲಿ ಅದನ್ನು ಬಾರಿ
ಸೋದು ಬೇಡ ಅಂದ್ಕೊಂಡೆ..... ಆದರೆ, ಮೆನ್ನನ ಸಂಕಟ ಕಡಿಮೆಯಾಗ್ತಿರೋ
ಹಾಗೆ ನನ್ನದು ಜಾಸ್ತಿಯಾಗ್ತಿದೆ.”
“ನನ್ನ ಸಂಕಟ ಕಡಿಮೆ ಅಂದ್ಕೊಂಡೆಯ ಬಟಾ?"
ಮೆನೆಪ್ಟಾ ಪೀಠದಿಂದೆದ್ದು ಕೊಠಡಿಯಲ್ಲಿ ಕೆಲವು ಹೆಜ್ಜೆ ಅತ್ತಿತ್ತ
ನಡೆದ, ಮೂಲೆಯಲ್ಲಿ ಗೋಡೆಗೊರಗಿಸಿದ್ದ ಬಟಾನ ಕೊಳಲನ್ನು ಎತ್ತಿಕೊಂಡು
ಸ್ವರ ಹೊರಡಿಸಲು ಯತ್ನಿಸಿದ. ವಿಫಲನಾದಾಗ ಸಣ್ಣನೆ ನಕ್ಕು, ಕೊಳಲನ್ನು
ಬಟಾನ ಕೈಗಿತ್ತು, " ಆ ಹಾಡು ಬಾರಿಸು," ಎಂದ.
“ಯಾವುದು ?”
“ನನ್ನ ನಲ್ಲೆಯ ಒಲವು.... ಬರ್ತಾ ದೋಣೀಲಿ ಬಾರಿಸಿದ್ದು.”
ಮುಗುಳುನಕ್ಕು ಬಟಾ "ಓ!" ಎಂದ. ಕೊಳಲಿನ ಒಂದು ತುದಿಯನ್ನು
ಬಾಯೊಳಗಿರಿಸಿ, ಧ್ವನಿ ಸೃಷ್ಟಿಸಿ, ಎರಡೂ ಕೈಗಳ ಬೆರಳುಗಳನ್ನು ತೂತುಗಳ
ಮೇಲೆ ಅತ್ತ ಇತ್ತ ಓಡಿಸುತ್ತ, ಧ್ವನಿವಾಹಿನಿಯನ್ನು ಪದಗಳಾಗಿ ಪರಿವರ್ತಿಸಿದ.
ಆ ಪದಗಳು ಅತಿಥಿ ಗೃಹದ ತುಂಬ ಅಲೆದುವು.
“ನನ್ನ ನಲ್ಲೆಯ ಒಲವು ನಲಿದಿದೆ ನದಿಯ ತಟದಲ್ಲಿ
ಕ್ರೂರ ಮೊಸಳೆಯು ಅವಿತು ಕುಳಿತಿದೆ ನೆರಳ ಮರೆಯಲ್ಲಿ
ಹೆದರೆ ನಾ,ಬೆದರೆ ನಾ
ನೀರಿಗಿಳಿದು ಈಸುವೆ
ನದಿಯಲಿ ನಾ ಧೀರ, ಬಲು ಧೀರ
ಪಾದಕದು ನೀರಲ್ಲ,___ನೆಲ
ಅವಳೊಲವೆ ನನ್ನ ಬಲ
ನಲ್ಲೆಯ ಕಂಡರೆ ನನಗೆ ಮುದ
ಬರಸೆಳೆಯಲು ನಾನು ಸಿದ್ಧ....”