ಪುಟ:Mrutyunjaya.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೦

ಮೃತ್ಯುಂಜಯ

ತಕ್ಷಣವೆ ತಲೆ ಎತ್ತಿ ಕುತೂಹಲದಿಂದ ಮಹಾ ಅರ್ಚಕನನ್ನು ಈಕ್ಷಿಸಿದ.
ನೂರುವರ್ಷಗಳಿ೦ದ ಹೆಚ್ಚುತ್ತ ಬಂದಿದ್ದ ದೇವಸೇವಕರ ಪ್ರಾಬಲ್ಯಕ್ಕೆ ಉತ್ತರಾ
ಧಿಕಾರಿಯಾದವನು ಹೇಪಾಟ್ ಎಂದು ಮೆನೆಪ್ಟಾ ಕೇಳಿದ್ದ. ದೇಶದಲ್ಲಿನ
ಎಲ್ಲ ದೇವಮಂದಿರಗಳ ಒಡೆತನವೂ ಅವನದು.ಮೆಂಫಿಸ್ ನ ದೇಗುಲಕ್ಕೂ
ಅಧೀನ ಮಂದಿರಗಳಿಗೂ ತೆರಿಗೆ ವಿನಾಯಿತಿಯ ಹೇರಳ ಆಸ್ತಿ ಇತ್ತು. ಸಹಸ್ರ
ಸಹಸ್ರ ಗುಲಾಮ ಚಾಕರರಿದ್ದರು. ಅಪಾರ ಬೆಲೆ ಬಾಳುವ ಕನಕ ಭಂಡಾರ
ವಿತ್ತು.ಆಳುವ ಪ್ರಭುವಿಗಿಂತಲೂ ಮಹಾ ಅರ್ಚಕನೇ ಹೆಚ್ಚು ಶ್ರೀಮಂತ
ಎಂಬ ಪಿಸುಮಾತು ಮೆನೆಪ್ಟಾನ ಕಿವಿಗೂ ಬಿದ್ದಿತ್ತು. ಮೆಂಫಿಸ್ ನಿಂದ
ಬಂದಿದ್ದ ದೊಡ್ಡ ದೋಣಿಯೊಂದರ ಹಿರಿ ಅಂಬಿಗ, "ಮಹಾ ಅರ್ಚಕನ
ಅನುಮತಿ ಪಡೆದೇ ಅರಮನೆಯಲ್ಲಿ ಕಾರ್ಯಗಳು ನಡೀತಿವೆ,” ಎಂದು ಸುದ್ದಿ
ಹಬ್ಬಿಸಿದ್ದ.
ತಲೆಗೂದಲು ಮಾತ್ರವಲ್ಲ, ಎಲ್ಲ ರೋಮವನ್ನೂ ಬೋಳಿಸಿದ ಮೈ.
ಕೆನ್ನೆ ಮೂಳೆಗಳು ಎದ್ದು ಕಾಣಿಸುವ ಮುಖ.ಶೀತಲವಾದ ಕಠೋರ ದೃಷ್ಟಿ.
ಪೆರೋನಷ್ಟು ಅಲ್ಲವಾದರೂ ಸಾಕಷ್ಟು ಎತ್ತರದ ನಿಲುವು. ಮೈಬಣ್ಣ ಸಾದಾ
ಗಪ್ಪು. ಕೈಯಲ್ಲಿ ಬೆಳ್ಳಿಯ ಹಿಡಿಯ ಅಧಿಕಾರದಂಡ. ಮೆಟ್ಟಿದ್ದುದು ಮರದ
ಹಾವುಗೆಗಳನ್ನು ಪೀಠದ ಮೇಲೆ ಕುಳಿತಿಲ್ಲ, ನಡೆಯುತ್ತಿದ್ದಾನೆ___ಎಂಬ ಭ್ರಮೆ
ಹುಟ್ಟಿಸುವ ಭ೦ಗಿ. ವಯಸ್ಸಿನಲ್ಲಿ ಪೆರೋಗಿ೦ತ ಚಿಕ್ಕವನು. ಆದರೆ ಮುಖದ
ಮೇಲೆ ಮುಪ್ಪಿನ ಕಳೆ.
ಎರಡು ಪಲ್ಲಕಿಗಳನ್ನೂ ಹಿಂಬಾಲಿಸಿ ಜನ ಗುಡ್ಡ ದತ್ತ ಸಾಗಿದರು.
ಯಾರೋ ಕೂಗಿ ಹೇಳುತ್ತಿದ್ದರು:
" ಈಗ್ಲೇ ಗುಡ್ಡಕ್ಕೆ ಹೋಗ್ಬೇಡಿ. ಮಂದಿರದಲ್ಲಿ ಪೆರೋ ವಿಶ್ರಾ೦ತಿ
ತಗೊಳ್ತಾರೆ. ಬಿಸಿಲು ತಗ್ಗಿದ ಮೇಲೆ ಒಸೈರಿಸ್ ಯಾತ್ರೆ.”
ಮೆನೆಪ್ಟಾ ಮತ್ತು ನೆಫಿಸ್ ಮಗನೊಡನೆ ಮುಂದಕ್ಕೆ ಹೆಜ್ಜೆ ಇಟ್ಟರು.
ಬರಿಗಾಲಿನ ನಡಿಗೆ. ಜನರ ಕಾಲ್ತುಳಿತದಿಂದ ಎದ್ದ ಧೂಳು ಬೆರೆತ ವಾತಾ
ವರಣ....
ತಪ್ಪಲಲ್ಲಿ ತಾಳೆ ಮರಗಳ ಹಲವು ಗುಂಪುಗಳಿದ್ದುವು.
ಒಂದರತ್ತ ತೋರು ಬೆರಳು ಚಾಚಿ ರಾಮೆರಿಪ್ಟಾ ಅಂದ: