ಪುಟ:Mrutyunjaya.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೩೦೭ ತಗ್ಗಿದ ಧ್ವನಿಯಲ್ಲಿ ನುಡಿದಳು, ನೆಫರ್ ಟೀಮ್.

 ದಾಸಿ ವಾದಕರ ಬಳಿಗೆ ಸಾರಿ, ಆರಂಭಿಸುವಂತೆ ಸಂಜ್ಞೆ ಮಾಡಿದಳು. ಒಬ್ಬ ತಂತಿಗಳನ್ನು ಮೀಟದ. (ಮುಂದೆ ಅವನು ಬಳಲಿದಾಗ ಇನ್ನೊಬ್ಬ.) ಮಾಂತ್ರಿಕ ಹೊರಡಿಸಿದ ಧ್ವನಿ ತರಂಗ ಮೋಹಕ, ಬಲು ಕ್ಷೀಣ, ಬೇರೆ ನೂರು ಮಾತುಗಳಿಗೆ ಸಪ್ಪಳಗಳಿಗೆ ಆಡ್ಡಿಯಾಗದಂತೆ.

“ಮಹಾಪ್ರಭು ಯಾಕೋ ವಿಲಂಬ ಮಾಡ್ತಿದಾರಲ್ಲ,” ಎಂದಳು ಮಹಾ ರಾಣಿ ಪೆರೋ ಬರುವ ಬಾಗಿಲಿನತ್ತ ನೋಡಿ: ಹಿಂದೆಯೊಮ್ಮೆ ನೆಫರ್ ಟೀಮ್ ಹಾಗೆ ಕೇಳಿದ್ದಾಗ 'ನೋಡಿಕೊಂಡು ಬರಲೆ?' ಎಂದು ನುಡಿದು ರಾಣಿಯ ಕೋಪಕ್ಕೆ ಬಲಿಯಾಗಿದ್ದಳು, ನೆಹನ ವೇಯ್ಟ್. ಅದು ನೆನಪಾಗಿ, ನಸುನಕ್ಕು,ಕಣ್ಣು ಕಿರಿದುಗೊಳಿಸಿ,ಮಹಾರಾಣಿಯನ್ನು ಆಕೆ ನೋಡಿದಳು. ಆ ಘಟನೆಯ ಸ್ಮರಣೆ ಹಸುರಾಗಿದ್ದ ನೆಫರ್ ಟೀಮ್ ಉದ್ದೇಶಪೂರ್ವಕವಾಗಿಯೇ ಆ ಮಾತನ್ನು ಆಡಿದ್ದಳು. ನೆಹನವೇಯ್ಟ್ ಪ್ರತಿಕ್ರಿಯೆ ನೀಡದೆ ಇದ್ದುದನ್ನು ಕಂಡು ಆಕೆ ಅಂದಳು: “ನೆಹನ, ನಿನ್ನ ವಿವೇಚನಾಶಕ್ತಿ ಹೆಚ್ಚಿದೆ.” ಮಹಾರಾಣಿಯ ಮೂಗಿಗೊಮ್ಮೆ ಗುದ್ದಬೇಕೆಂದು ನೆಹನವೇಯ್ಟಳ ಬಹಳ ದಿನಗಳ ಬಯಕೆ. ಈ ದಿನವೂ ಮೂಗನ್ನು ನೋಡಿದಳು. ಆದರೆ,ಎಷ್ಟೋ ಬಾರಿ ಮಾಡಿದ್ದಂತೆ, ಈ ಸಲವೂ ಸುಮ್ಮನೆ ಕುಳಿತಳು. ರಾಣಿ ನೆಹನಳ ಆಭರಣಗಳನ್ನು ದಿಟ್ಟಿಸಿ, “ನಿನ್ನ ಕಿರೀಟ ಚೆನ್ನಾಗಿದೆ” ಎಂದಳು. ನೆಹನವೇಯ್ಟ್ ಗೆ ಸಿಟ್ಟು ಬಂತು. ಅವಳೆಂದಳು : “ಮಹಾರಾಣಿಯವರು ಧರಿಸೋದು ಕಿರೀಟ. ನನ್ನದು ಬರೇ ಶಿರೋ ಪಟ್ಟ."

“ಕೋಪ! ಈಗೀಗ ಶಿಷ್ಟಾಚಾರಗಳನ್ನು ಬಿಟ್ಟಿಟ್ಟಿದೀಯಾ ಅಂತೇನೆ.

ನನ್ನ ಹೊಸ ಕಿರೀಟ ಹ್ಯಾಗಿದೆ ಅಂತ ಹೇಳಲೇ ಇಲ್ಲ.” “ಇಂಥದನ್ನು ಈವರೆಗೆ ಈ ಬಡ ಕಣ್ಣುಗಳು ಕಂಡಿಲ್ಲ ಮಹಾರಾಣಿ.”