ಪುಟ:Mrutyunjaya.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೨೩

ದೇವತೆಯ ಉತ್ಸವದ ದಿವಸ ಅದನ್ನು ಕೇಳಿದವರಿಗೆ ಪುಣ್ಯ ಬರ್ತದೆ."
"ಆಗಲಿ, ಆಗಲಿ. ಶ್ರೀಮಂತರ ಭೋಜನಕ್ಕೂ ಹಾಡು ; ಬಡವರ
ಊಟಕ್ಕೂ ಹಾಡು, ಯಾಕಾಗಬಾರ್ದು ? ಯಾಕಾಗಬಾರ್ದು ?" ಎಂದ
ನೊಬ್ಬ.
ಹತ್ತಿರದ ಚೂರು ನೆರಳಿಗೆ ಮುದುಕನನ್ನು ಕರೆದೊಯ್ಯುತ್ತ ಹುಡುಗ
ಅವನಿಗೆ ಹೇಳಿದ:
"ಇವೆರೆಲ್ಲ ಒಳ್ಳೇಯವರು ತಾತ...."
ನೆಫಿಸ್ ಅಂದಳು:
"ನಮ್ಮ ಜತೆ ಊಟ ಮಾಡಿ ಹಾಡ್ಬೌದಲ್ಲ?"
"ಛೆ ! ಛೆ ! ನೀವು ಉಣ್ಣುತ್ತಾ ನನ್ನ ಹಾಡು ಕೇಳ್ಬೇಕು....
ನಾನೂ ನನ್ನ ಮೊಮ್ಮಗನೂ ಆಮೇಲೆ ಉಣ್ತೇವೆ."
ಜರ್ಜರಿತ ದೇಹದಿಂದ ಹೊರಟ ಧ್ವನಿ. ಆದರೆ ಅದು ಇಂಪಾಗಿತ್ತು.
ದೃಢವಾಗಿತ್ತು.
ಯಾತ್ರಿಕರು ಒಂದಷ್ಟು ಖಿವವ ಕುಡಿದರು.
ಒಬ್ಬನೆಂದ:
"ಊಟ ಆಮೇಲೆಯೇ ಮಾಡು. ಈಗ ಒಂದಿಷ್ಟು ಖಿವವ ತಗೋ,
ಗಂಟಲಿಗೆ ಒಳ್ಳೇದು."
ಮುದುಕ ನಕ್ಕು "ಆಗಲಿ!" ಎಂದ, ಏಕನಾದವನ್ನು ಮೀಟುತ್ತ.
ಅವನ ಕಂಠಶ್ರೀಗೆ ಮತ್ತಷ್ಟು ಮೆರಗು ನೀಡಿತು, ಆ ಪಾನೀಯ.
ಸೃಷ್ಟಿಯ ಕಥೆ ಕೇಳುವ ಆಸೆಯಿಂದ ಯಾತ್ರಿಕರು ಸದ್ದಿಲ್ಲದೆ ಉಂಡರು.
ಗಾಯಕ ಆರಂಭಿಸಿದ:
"ಯೋ ಯೋ ಯೋ....
ಹೇಳುವೆ ಕೇಳಿ ಸೃಷ್ಟಿಯ ಕಥೆಯ
ಈ ಲೋಕದ ಆದಿ ಅನಾದಿಯ ಕಥೆಯ
ಯೋ ಯೋ ಯೋ...."
ತನ್ಮಯತೆ. ಲೋಕದ ಪ್ರಸವವನ್ನು ಕಣ್ಣಾರೆ ಆತ ಕಂಡಿದ್ದನೇನೋ
ಎನಿಸುವಂಥ ಖಚಿತ ವಾಕ್ಕುಗಳು.