ಪುಟ:Mrutyunjaya.pdf/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೩೪೨ ಮೃತ್ಯುಂಜಯ

ಹಾಕಿ ಸುತ್ತುತ್ತಾರೆ. ರಕ್ಷಿತ ಶವ. ನೆಟ್ಟಿಗೆ ನಿಲ್ಲಿಸ್ತಾರೆ. ಅಂತಿವ ಯಾತ್ರೆಗೆ ಸಿದ್ಧತೆ.ಅರ್ಚಕ ತುಟಿಗಳ ನಡುವೆ ಗೀರು ಹಾಕಿ ಬಾಯಿಯ ಸಂದಿ ಬಿಡಿಸುತ್ತಾನೆ.

ಬಹಳ ಜನ ಅಳಬೇಕು, ಬಹಳ ಜನ. ಸಾವಿರಾರು ಶೋಕ ಸ್ತ್ರೀಯರನ್ನು ನೇಮಿಸ್ಬೇಕು. ಸ್ತ್ರೀಯರಿಂದ ಶೋಕರೋದನ. ಅರ್ಚಕನಿಂದ ಶೋಕ ನರ್ತನ. ಮಂತ್ರ ಪಠಣ.

ಎಷ್ಟು ಸೊಗಸಾದ ಭೋಜನ ಏರ್ಪಡಿಸ್ಬೇಕು ಅಂದರೆ, ಉಣ್ಣುತ್ತ ಎಲ್ಲರೂ “ಮಹಾಪುರುಷ” ಎಂದು ತನ್ನನ್ನು ಕೊಂಡಾಡಬೇಕು.

ಆದರೆ, ತಾನು ಸತ್ತ ಅನಂತರದ ಈ ಕೆಲಸಗಳನ್ನೆಲ್ಲ ಸಮರ್ಪಕವಾಗಿ ಮಾಡಿಸುವವರು ಯಾರು ? ತನ್ನ ಸುಪುತ್ರ. ಆ ಪುತ್ರ ಅದೆಷ್ಟು ಮಾಡಿಸ್ತಾನೊ ? ಅದೆಷ್ಟು ಬಿಡ್ತಾನೋ?

ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಉದ್ಭವವಾಗುವುದು ಗೋರಿಯ ಬಾಗಿಲು ಮುಚ್ಚಿದ ಮೇಲೆ.ಅದು ಭದ್ರವಾಗಿರಬೇಕು.ಗೋರಿ ಕಳ್ಳರಿಂದ ರಕ್ಷಣೆ.... ಇಂಥ ಕಲ್ಲನ್ನು ಹೀಗೆ ಸರಿಸಿದರೆ ಒಳ ಪ್ರವೇಶ-ಅಂತ ಕಲ್ಲು ಕೆಲಸಗಾರರೇ ಚೋರರಿಗೆ ಸುಳಿವು ಕೊಟ್ಟರೆ ? ಈ ವಿಧಾನದಿಂದಲೇ ಅಲ್ಲವೇ ಹಲವು ಗೋರಿಗಳನ್ನು ದರೋಡೆಗಾರರು ಲೂಟಿ ಮಾಡಿರುವುದು ? ಗೋರಿಪ್ರದೇಶಕ್ಕೆ ರಕ್ಷಣೆ ಒದಗಿಸಬೇಕು ಪೆರೋ.ನಿತ್ಯ ಕಾವಲು.ಯಾರೂ ಹೊಲಸು ಮಾಡಿ ಗೋರಿಯನ್ನು ಅಪವಿತ್ರಗೊಳಿಸಬಾರದು. ವರ್ಷಕ್ಕೊಮ್ಮೆ ಪೂಜೆ. ಸತ್ತ ಮೇಲೂ ದೇವರ ರಕ್ಷಣೆ ಬೇಡವೆ? ಅಂಥ ರಕ್ಷಣೆ ಇದ್ದರಲ್ಲವೆ ಕರೆ ಬಂದಾಗ ಸತ್ತವನು ಎದ್ದು ಬರುವ ಸಾಧ್ಯತೆ ? ಈ ವೆಚ್ಚಕ್ಕೆ ಹಣ ?

ಒಂದಷ್ಟು ಹೊಲಗಳನ್ನೂ ರಾಸುಗಳನ್ನೂ ದೇವಮಂದಿರಕ್ಕೆ ಉಂಬಳಿಯಾಗಿ ಬಿಡಬೇಕು. ನಾನೇನೋ ಬಿಡಬಹುದು. ಆದರೆ ಮಗ ಅದನ್ನು ಮುಂದುವರಿಸಿಕೊಂಡು ಹೋಗುವವನೋ ಇಲ್ಲವೋ. ಅಥವಾ, ಮಂದಿರದವರೇ ಈ ಹೊಲಗಳನ್ನೂ ರಾಸುಗಳನ್ನೂ ಬಳಸಿ,ಸೋಮಾರಿಗಳಾಗಿ ತನ್ನನ್ನು ಮರೆತರೆ? 'ಇವರೆಲ್ಲ ನನ್ನನ್ನು ಮರೆತರೆ?' ಒಂದು ಹನಿ ಕಣ್ಣೀರು....