ಮೃತ್ಯುಂಜಯ ೩೫೯
ತನ್ನ ಅಧಿಕಾರದಂಡದ ತುದಿಯನ್ನು ಹೇಪಾಟ್ ಒಂದು ಮೊಳ ಮುಂದಕ್ಕೆ ಎತ್ತಿ ಇರಿಸಿದ, ಅವನ ಆಪ್ತ ಸಹಾಯಕ ದೇವಸೇವಕನೆಂದ: "ಭಕ್ತಾದಿಗಳು ಮಹಾ ಅರ್ಚಕರ ಅಧಿಕಾರ ದಂಡವನ್ನು ಚುಂಬಿಸಿ ಧನ್ಯರಾಗಬಹುದು." ಇದು ಅಸಾಮಾನ್ಯ ಸನ್ನಿವೇಶ ಎಂಬ ಭಾವನೆ ಎಲ್ಲರಿಗೂ. ಅವರ ದೃಷ್ಟಿ ಹೆಖ್ವೆಟನ ಮೇಲೆ ನೆಟ್ಟಿತು. ಆತ ಬೆನ್ನು ನೆಟ್ಟಿಗೆ ಮಾಡಿ, ಧ್ವನಿ ಏರಿಸಿ ಅಂದ : "ತಡೀರಿ! ತಡೀರಿ! ಅವಸರ ಬೇಡ. ರಾ ಪುತ್ರ ಪೆರೋನಿಂದ ಆಜ್ಞಪ್ತನಾಗಿ ನಾನು ಬಂದಿದ್ದೇನೆ. ಮಹಾ ಅರ್ಚಕರ ಜತೆ ಮಾತಾ ಡ್ಬೇಕು. ಮಾತು ಮುಗಿದ್ಮೇಲೆ ಅವರ ಆಶೀರ್ವಾದ ಪಡೆದೇ ನಾವು ಹೊರಡ್ತೇವೆ.” ಹೇಪಾಟ್ ಹಲ್ಲು ಕಡಿದ. ತನ್ನ ಕಣ್ಣುಗಳಿಂದ ಕಿಡಿ ಹಾರಿದಂತೆ ಅವನಿಗೆ ಅನಿಸಿತು.ಇದು ಇವರನ್ನೆಲ್ಲ ದಹಿಸಿಬಿಡುವ ಸಿಟ್ಟು-ಎಂದುಕೊಂಡ. ಕ್ಷಣ ಕಾಲ ಕಣ್ಣುಗಳನ್ನು ಭದ್ರವಾಗಿ ಮುಚ್ಚಿದ. ಎವೆಗಳನ್ನು ಸರಿಯಾಗಿ ತೆರೆಯದೆಯೇ ಏರುಸ್ವರದಲ್ಲಿ ಅವನೆಂದ : "ರಾಜಧಾನಿಯ ಹಿರಿಯ ಸಲಹೆಗಾರರ ಮಂಡಲದ ಒಬ್ಬ ಸದಸ್ಯ–" ಮಹಾ ಅರ್ಚಕನ ಮಾತನ್ನು ನಡುವೆ ಮುರಿದು ಹೆಖ್ವೆಟ್ ಉದ್ಗರಿಸಿದ : "ಹಿರಿಯ ಸದಸ್ಯ !" ಮತ್ತಷ್ಟು ಧ್ವನಿ ಏರಿಸಿ ಕೀರಲು ಗಂಟಲಲ್ಲಿ ಹೇಪಾಟ್ ಮುಂದುವರಿಸಿದ: “ಆತ ನಿಲ್ಲು ಎಂದಾಕ್ಷಣ ಲೋಕವ್ಯಾಪಾರವೆಲ್ಲ ಸ್ತಬ್ಧವಾಗಬೇಕಾ ?” "ಲೋಕವೇ ತಾನು ಎಂದು ಭಾವಿಸುವುದು ಉದ್ಧಟತನದ ಪರಮಾವಧಿ.” ಹೇಪಾಟ್ ಒಬ್ಬನಿಗೆ ಅರ್ಥವಾಯಿತು ಆ ಚುಚ್ಚುನುಡಿ, ಆತ ಅವುಡು ಗಚ್ಚಿ ಫೂತ್ಕರಿಸಿದ. “ಐಗುಪ್ತದ ಪರಮೋಚ್ಛ ಧರ್ಮಗುರುವಿನ ಮುಂದೆ ವೃದ್ಧರು ಸ್ವಲ್ಪ ನಾಲಿಗೆ ಬಿಗಿಹಿಡೀಬೇಕು ! "