ಪುಟ:Mrutyunjaya.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೬೫ "ಆಗ್ಲಿ. ಹೇಳ್ತೀನೆ." ಟೆಹುಟಿ ಬಕಿಲರಿಬ್ಬರನ್ನ್ನೂ ಮಹಾ ಅರ್ಚಕ ಆಶೀರ್ವದಿಸಿದ. ಬಾಯಿ ತೆರೆದು, ಸಣ್ಣನೆ ಆಕಳಿಸಿ, ತನ್ನ ಸಹಾಯಕನೆಡೆಗೆ ವಿಶ್ರಾಂತಿಗೂ ಹೊತ್ತಾಯಿತೆಂಬ ಸೂಚನೆ.

                    *                        *                       *                        *

ನಡೆದದ್ದು ತಣ್ಣಗಿನ ಮಾತುಕತೆ_ಎಂದು ನಿರಾಶರಾದರು ಚಕಮಕಿ ನಿರೀಕ್ಷಿಸಿದ್ದ ಆನ್ ನಗರಿಯ ನಾಗರಿಕರು.

ಮಹಾ ಅರ್ಚಕನೊಡನೆ ಹೆಖ್ವೆಟ್ ಮಾತನಾಡಿದ ರೀತಿ ಸೆರ್ಕೆಟ್ ನನ್ನು ದಂಗು ಬಡೆಸಿತ್ತು. ಈ ತಾತಯ್ಯನನ್ನು ಭುಜಗಳ ಮೇಲೆ ಹೊತ್ತುಕೋ ಎಂದು ಯಾರಾದರು ಹೇಳಿದ್ದರೆ ಅದನ್ನು ಮಾಡುವುದಕ್ಕೂ ಅವನು ಸಿದ್ದನಿದ್ದ.

ಉತ್ಕೃಷ್ಟ ಭೋಜನ. ("ರುಚಿ ! ರುಚಿ ! ಹೊಟ್ಟೆ ತುಂಬುವಷ್ಟು ತಿನ್ನಲಾರೆ ಮಗೂ, ವಯಸ್ಸಾಗ್ತಾ ಬಂತು. ಪಚನಶಕ್ತಿ ಕಮ್ಮಿ.") ವಯಸ್ಸಾದ ದ್ರಾಕ್ಷಾಸುರೆ. ಸೊಗಸಾಗಿತ್ತು. (" ಮಹಾ ಅರ್ಚಕರು ಭಾರೀ ಸಿಟ್ಟಿನಲ್ಲಿದ್ದರು ಅಲ್ಲವಾ ? ಏನಾಯ್ತು ಕಡೆಗೆ ?" "ನೀವು ತುಂಬಾ ಚೆನ್ನಾಗಿ ಮಾತಡಿದಿರಿ." "ನಿದ್ದೆ ಬರ್ತಿದೆ. ಸಾಯಂಕಾಲ ಟೆಹುಟಿ,ಬಕಿಲ, ಆ ಭೂಮಾಲಿಕರು-ಅವರನ್ನೆಲ್ಲ ಕರೆಸು. ಅವರ ಜತೆ ಮಾತಾಡ್ತೇನೆ. ಅವರು ಯಾರೂ ನನಗೆ ಹೆದರಬೇಕಾಗಿಲ್ಲ." " ಕರೆಯೋದಕ್ಕೆ ನಾನೇ ಹೋಗ್ತೇನೆ." " ಬೇಡ, ಬೇಡ. ನೀನು ಇಲ್ಲೇ ಇರು. ಬೇರೆ ಯಾರಾದರೂ ಹೋಗ್ಲಿ." " ಆಗಲಿ, ಸ್ವಾಮಿ.")

 ಹೆಖ್ವೆಟ್ ಎದ್ದಾಗ ಬಿಸಿಲು ಬಾಡಿತ್ತು, ಸೆರ್ಕೆಟ್ ಬಾಗಿಲ ಬಳಿ ನಿಂತಿದ್ದ. ಅವನ ಜೋಲುಮೋರೆ ನೋಡಿ ಹೆಖ್ವೆಟ್ ಕೇಳಿದ .
 "ಟೆಹುಟಿ, ಭೂಮಾಲಿಕರು ಯಾರೂ ಇಲ್ಲ ಅಲ್ಲವಾ ?"
ಸೆರ್ಕೆಟ್ ಗೆ  ಆಶ್ಚರ್ಯ ! ನಿದ್ದೆಹೋಗಿದ್ದ ಈ ಹಿರಿಯರಿಗೆ ಅದು ಹೇಗೆ ತಿಳಿಯಿತು ?   
 "ಇಲ್ಲ, ಸ್ವಾಮೀ. ಮಾಯವಾಗಿದ್ದಾರೆ."