ಪುಟ:Mrutyunjaya.pdf/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ " ನಸುಕಿನಲ್ಲಿ ಪೂಜೆ ಮುಗಿದ ತಕ್ಷಣ ಪ್ರಯಾಣವಂತೆ, " ಎಂದು ತಿಳಿಸಿದ. " ಒಳ್ಳೇದು." ಎಂದ ಹೆಖ್ವೆಟ್, 'ಬೆಳಗಿನ ನಿದ್ದೆಗೆ ತುಸು ಅಡ್ಡಿ ಎಂದು ಗೊಣಗುತ್ತ.

     *               *                 *                 *

ರಾತ್ರೆ ಹೆಖ್ವೆಟ್ ಲಘು ಆಹಾರ ಸ್ವೀಕರಿಸಿದ. ಹಿಂದಿನ ರಾತ್ರೆ ದಾಸಿಗೆ ತಾನು "ಹೂಂ" ಎಂದುದು ನೆನಪಿತ್ತು. ಇಂದು ಅಪರಾಹ್ನದ ವಿಶ್ರಾಂತಿಯಿಂದ ಅವನ ದೇಹದಲ್ಲಿ ಲವಲವಿಕೆ ಮೂಡಿತ್ತು. ಬಡಿಸುವಾಗ ಕಾಣಿಸಿಕೊಂಡಿರಲಿಲ್ಲ ಆ ದಾಸಿ. ಆದರೆ ಮಲಗುವ ಕೊಠಡಿಯಲ್ಲಿ ಅವಳಿದ್ದಳು. ಉಡುಗೊರೆ? ತನ್ನ ಎದೆಯಲ್ಲಿದ್ದ ಸರಗಳಿಂದ ಸೊಬಗಿನ ಕವಡೆಹಾರ ಒಂದನ್ನು ಹೆಖ್ವೆಟ್ ಬಿಚ್ಚಿ ದಾಸಿಗಿತ್ತ.('ಇದು ಪೆರೋ ಸಂಸ್ಕೃತಿ, ಅಮಾತ್ಯ ಸಂಸ್ಕೃತಿ.') ದಾಸಿ ಮೆಖ್ ಮೆಖ್ ಹೂಗಳ ಶಿರೋಪಟ್ಟಿಯನ್ನೂ ಸೊಂಟಪಟ್ಟಿಯನ್ನೂ ಧರಿಸಿದ್ದಳು. ಹೆಖ್ವೆಟ್ ಇತ್ತ ಸರವನ್ನು ಕತ್ತಿಗೆ ಹಾಕಿಕೊಂಡಳು. ಅವಳನ್ನು ಹತ್ತಿರ ಬರಸೆಳೆದಾಗ ಹೆಖ್ವೆಟ್ ಗೆ ಟೆಹುಟಿಯ ನೆನಪಾಯಿತು. ಆನ್ ನಗರಿಗೆ ರಾಜಕಾರ್ಯ ನಿಮಿತ್ತ ಬರುವ ಎಲ್ಲರ ಸೇವೆಯನ್ನೂ ಇವಳು ಮಾಡಬೇಕು. ರಾ ಮಂದಿರದಲ್ಲಿ ದೇವಸೇವಿಕೆಯರು ಇರಲಿಲ್ಲ. ಈಕೆ ಮಹಾ ಅರ್ಚಕನ ಸೇವೆಯನ್ನು ಕೂಡಾ ? ಇಲ್ಲದ ಶಕ್ತಿಯನ್ನು ತೋಳುಗಳಿಗೆ ತಂದುಕೊಂಡು ಹೆಖ್ವೆಟ್ ಆ ದಾಸಿಯನ್ನು ಬಿಗಿದಪ್ಪಿದ. ಅವನ ಬಾಹುಬಲದಿಂದ ನೋವಾಗುತ್ತಿದೆ ಎಂದು ನಟಿಸುತ್ತ ದಾಸಿ ನರಳಿಕೆಯ ಸದ್ದು ಮಾಡಿದಳು.