ಪುಟ:Mrutyunjaya.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೮೩ ಹೇಪಾಟ್ ಸಿಡಿನುಡಿದ : "ಸುಳ್ಳು ! ಅಪ್ರಬುದ್ಧರ ವ್ಯವಹಾರದಿಂದ ಸಿಂಹಾಸನದ ಮೂಲೆ ಗುಂಪಾಗ್ತದಲ್ಲ ಅನ್ನೋದೆ ನನ್ನ ಕಾತರ.” “ರಾಜಕುಮಾರ ಅಪ್ರಾಪ್ತ ವಯಸ್ಕ—ಒಪ್ತೇನೆ.” “ರಾಜಕುಮಾರನದಲ್ಲ–ಅಪ್ರಬುದ್ಧತೆ ಸೆಡ್ ಉತ್ಸವಕ್ಕಾಗಿ ಹಾತೊರೆಯುತ್ತಿರೋ ಅರಸನದು.” “ಪ್ರಾಚೀನ ಕಟ್ಟಳೆಗೆ ಅನುಗುಣವಾಗಿಲ್ಲವಾ ಸೆಡ್ ಉತ್ಸವ?” "ಮಹಾ ಅರ್ಚಕರ ಸ್ಥಾನಮಾನಗಳ ವಿಷಯದಲ್ಲಿ ಪ್ರಾಚೀನ ಕಟ್ಟಳೆ ಏನು ಹೇಳ್ತದೆ ಮಹಾರಾಣಿ?” “ಮಹಾ ಅರ್ಚಕರು ಕ್ಷಮಿಸ್ಬೇಕು. ಗುರುಮನೆಯ ವಿಷಯದಲ್ಲಿ ಅರಮನೆಯಿಂದ ಮುಂದೆ ಯಾವ ಅಪಚಾರವೂ ಆಗುವುದಿಲ್ಲ ಅಂತ ಭರವಸೆ ನೀಡ್ತೇನೆ.” ಹೇಪಾಟ್ ಮಾನವಾಗಿ ಮಹಾರಾಣಿಯನ್ನು ಆಪಾದಮಸ್ತಕ ದಿಟ್ಟಿಸಿ ನೋಡಿದ. ನೆಫರ್ ಟೀಮಳೆ ಮುಖ ರಕ್ತರಂಜಿತವಾಯಿತು. ಚಿರತೆ ಚರ್ಮದ ಸುರುಳಿ ಅಲ್ಲಿಯೇ ಇತ್ತು, ಮಹಾ ಅರ್ಚಕನ ದೃಷ್ಟಿ ಅದರ ಮೇಲೆ ತಂಗಿತು. ನೆಫರ್ಟೀಮ್ ಆಂದಳು: “ಪುಟ್ಟ ಕಾಣಿಕೆ ಸ್ವೀಕರಿಸ್ಬೇಕು. ನಿಮಗೆ ಇಷ್ಟವಾಗಬಹುದು.ಬಿಡಿಸಿ ತೋರಿಸಲೆ?” "ಬೇಡ. ಅಲ್ಲೇ ಇರಲಿ. ಮಹಾರಾಣಿ ತಂದುದನ್ನು ಸ್ವೀಕರಿಸಿದ್ದೇನೆ.” "ಇದರ ಸೊಬಗು ಅಪೂರ್ವವಾದದ್ದು. ಸೆಡ್ ಉತ್ಸವದ ಪೂಜೆಯ ವೇಳೆ ಮಹಾ ಅರ್ಚಕರು ಇದನ್ನು ಧರಿಸಿದರೆ ಈ ಭಕ್ತಿಗೆ ಪರಮ ಸಂತೋಷ ವಾಗ್ತದೆ. ನನ್ನ ಮೇಲೂ ರಾಜಕುಮಾರನ ಮೇಲೂ ಕರುಣೆ ತೋರಿದ್ದೀರಿ. ನಾನು ಆರಂಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ದಯೆಪಾಲಿಸಿಬಿಡಿ. ಹೊರಡ್ತೇನೆ.'