ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೯೮ ಮೃತ್ಯುಂಜಯ
"ಸರು ಸಭೆಯಲ್ಲಿ ದೇಶದ ಧರ್ಮಗುರುವನ್ನು ಹೀಗಳೆಯಲಾಯಿತಂತೆ ಹೌದೆ?" "ಸುಳ್ಳು, ಮಹಾ ಅರ್ಚಕರ ಪ್ರತಿಷ್ಠೆಗೆ ಧಕ್ಕೆ ಉಂಟಾಗೋ ಹಾಗೆ ಯಾರೂ ನಡಕೊಂಡಿಲ್ಲ," ಎಂದ ಹೆಖ್ವೆಟ್. ಆತನತ್ತ ಒಮ್ಮೆ ನೋಡಿ ಆಮೆರಬ್ ನುಡಿದ: "ಅಸ್ವಸ್ಥ ಸಂಬಂಧಿಕರನ್ನು ನೋಡೋದಕ್ಕೇಂತ ಕೆಲವರು ಆನ್ ನಗರಿಗೆ ಹೋಗ್ತಾ ಇದ್ರು." ಹೇಪಾಟ್ ಕಿರಿಚಿದ: "ದೇವ ಸೇವಕರ ಮೇಲೆ ಬೇಹುಗಾರಿಕೆಯ ಆರೊಪ ಹೋರಿಸ್ತಿದೀರ?" ಪೆರೋ ಅಂದ: "ಪ್ರಜೆಗಳು ಏನು ಹೇಳ್ತಿದಾರೆ ಅಂತ ದೇಶದ ನಾನಾ ಭಾಗಗಳ ಅರ್ಚಕ ವರ್ಗ ತಿಳಿಸುವ ರಹಸ್ಯ ಮಾಹಿತಿಯನ್ನು ಆಧರಿಸಿ ರಾಜ್ಯಭಾರ ನಡೆಯೋದು ಪ್ರಾಚೀನ ಕಟ್ಟಳೆ." "ಆಗ ನಾವು ನಿಮ್ಮ ಕಣ್ಣು ಕಿವಿ ಆಗಿದ್ದೆವು. ಈಗ ಆ ಬಿರುದು ಅಮಾತ್ಯ ರಿಗೆ ಬಂದಿದೆ!" ನೆಫರ್ ಟೀಮಳ ಸಾಂತ್ವನದ ಧ್ವನಿ ಮತ್ತೆ ಕೇಳಿಸಿತು: "ವಿಷಯ ತಿಳಿಯೋ ಕುತೂಹಲ ಸ್ವಾಭಾವಿಕ. ಅದನ್ನು ಬೇಹುಗಾರಿಕೆ ಅಂತ ಕರೀಬೇಕಾದ ಅಗತ್ಯವೇನೋ?........" ಮಹಾರಾಣಿಯನ್ನೊಮ್ಮೆ ದಿಟ್ಟಿಸಿ ಪೆರೋ ವಾಗ್ಬಾಣ ಪ್ರಯೋಗಿಸಿದ: "ರಾ ಸಂತಾನವಾದ ನಾವು ಧಾರ್ಮಿಕ ವಿಷಯಗಳಲ್ಲಿ ಯಾವತ್ತೂ ಹಸ್ತಕ್ಷೇಪ ಮಾಡೋದಿಲ್ಲ." "ಅರಮನೆ ವಿಷಯಗಳಲ್ಲಿ ಗುರುಮನೆ ಕೈ ಹಾಕ್ತಿದೆ ಅನ್ನುತ್ತೀರಾ?" ಅಮಾತ್ಯ ತನ್ನ ದಾಳವನ್ನು ಮುಂದಿಟ್ಟ, ಅಡ್ಡಗಟ್ಟಲೆಂದು. "ಮಹಾಪ್ರಭುಗಳು ಹಾಗೆ ಅನ್ನೋದಿಲ್ಲ. ಹಲವರಲ್ಲಿ ಅಂಥ ಭಾವನೆ ಮೂಡಿದೆ ಅಂತ ಅವರಿಗೆ ವ್ಯಥೆ. ವಿಚಾರಣೆಗೆ ಗುರಿಯಾಗಬೇಕಾಗಿದ್ದ ಒಬ್ಬ ಉದ್ಧಟ ಅಧಿಕಾರಿಗೆ ಮಹಾ ಅರ್ಚಕರ ಕೃಪಾಶ್ರಯ ದೊರೆತಿದೆ."