ಪುಟ:Mrutyunjaya.pdf/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೧೪ ಮ್ರುತ್ಯುಂಜಯ

    ಬಂದವನು ನಿದ್ದೆಹೋದೊಡನೆ, ಮೆನ್ನ ಒಂದು ಬಟ್ಟೆ ಹೊದೆದು ಕತ್ತಲೆಯ ಮರೆಯಲ್ಲಿ ಪ್ರಾಕಾರದ ತೂಬಿನತ್ತ ನಡೆದ. ಎರಡು ಮೂರು ಸಾರಿ ಯತ್ನಿಸಿದ ಮೇಲೆ ಕಲ್ಲನ್ನು ಬದಿಗೆ ಸರಿಸುವುದು ಸಾಧ್ಯವಾಯಿತು. ಪ್ರಾಕಾರದಾಚೆಗೆ ನದಿಯ ದಂಡೆ. ಅದನ್ನು  ತಲಪಿ ಎದ್ದು ನಿಂತು,'ಆಹಾ!' ಎಂದು ಮನಸ್ಸಿನೊಳಗೇ ಆತ ಉದ್ಗರಿಸಿದ.
    ಆದರೆ ದೋಣಿಕಟ್ಟೆ ಮುಟ್ಟಿದಾಗ ಮೆನ್ನನಉತ್ಸಾಹ ಇಳಿದುಹೋಯಿತು. ನೀರಾನೆ ಪ್ರಾಂತವನ್ನು ಹಾದು ಮುಂದೆ ಹೋಗುವ ಒಂದು ದೋಣಿಯೂ ಅಲ್ಲಿರಲಿಲ್ಲ. ಗೂಡಾರದಲ್ಲಿ ಕಟ್ಟೆಯ ಸಹಾಯಕ ಅಧಿಕಾರಿ ಇದ್ದ. ರಾತ್ರಿ ಪಾಳಿಯವನು. ಮೆನ್ನ ಅತ್ತ ಸುಳಿಯಲಿಲ್ಲ. ಆ ಅವೇಳೆಯಲ್ಲಿ ಅವನ ಗುರುತು ಹಿಡಿಯುವವರು ಕಟ್ಟೆಯಲ್ಲಿ ಯಾರೂ ಇರಲಿಲ್ಲವಾದರೂ ಜಾಗರೂಕನಾಗಿದ್ದು ಉತ್ತರದಿಂದ ಬರುವ ದೋಣಿಗಳಿಗಾಗಿ ಮೆನ್ನ ಕಾದು ಕುಳಿತ.
   ನಡುವಿರುಳು ದಾಟಿ ಸ್ವಲ್ಪ ಹೊತ್ತಾದ ಮೇಲೆ ಒಂದು ದೋಣಿ ಬಂತು. ಅದು ಹೊರಟಿದ್ದುದು ನೀರಾನೆ ಪ್ರಾಂತದ ಎದುರುದಂಡೆಯ ಟಗರು ಪ್ರಾಂತಕ್ಕೆ .'ಕೇಳಿಕೊಂಡರೆ ಇವರು ಸುದ್ದಿ ಮುಟ್ಟಿಸಲೂ ಬಹುದು.' ಆ ವಿಷಯವಾಗಿ ಅಂಬಿಗರೊಡನೆ ಮಾತು ಆರಂಭಿಸೋಣ ಎನ್ನುವಷ್ಟರಲ್ಲಿ ದೊಡ್ಡ ಹೇರುನಾವೆ ಕೆಳಗಿನಿಂದ ಬರುತ್ತಿರುವುದು ಕಾಣಿಸಿತು. ಕಟ್ಟೆಯನ್ನೇರಿದ್ದ ಟಗರು ಪ್ರಾಂತದ ಅಂಬಿಗರು ಆ ನಾವೆಯತ್ತ ನೋಡಿ, “ಕೆಫ್ಟು" “ಕೆಫ್ಟು” ಎಂದುದು ಕೇಳಿಸಿತು. ಮೆನ್ನನಿಗೆ ಪಾರವಿಲ್ಲದ ಹರ್ಷ. ತನ್ನನ್ನು ತಾನೆ ನಂಬದಂಥ ಪರಿಸ್ಥಿತಿ.
   ಹೇರುನಾವೆ ದೋಣಿಕಟ್ಟೆಯ ದಕ್ಷಿಣ ತುದಿಯಲ್ಲಿ ತಂಗಿತು. ನಿಧಾನವಾಗಿ ನಾವೆಯಿಂದ ಕಟ್ಟೆಗೆ ಹಲಗೆಗಳನ್ನು ಹಾಸಿ ವಿದೇಶಿ ಅಂಬಿಗರು ಕೆಲವರು ನಡೆದು ಬಂದರು.
   ಅವರ ಬಳಿ ಸಾರಿ ಮೆನ್ನ ಕೇಳಿದ :
  “ಕೆಫ್ಟು ನಾವೆಯಲ್ಲಿದ್ದಾರಾ?"
   ಆ ಅಂಬಿಗರು ಕಟ್ಟೆಯ ದೀಪದ ಮಬ್ಬು ಬೆಳಕಿನಲ್ಲಿ ಮೆನ್ನನನ್ನು ದಿಟ್ಟಿಸಿದರು.      
  ಅವರಲ್ಲೊಬ್ಬ ಸ್ನೇಹಪರವಲ್ಲದ ಸ್ವರದಲ್ಲಿ ಕೇಳಿದ: