ಪುಟ:Mrutyunjaya.pdf/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮ್ರುತ್ಯಂಜಯ ೪೧೫

  “ಯಾರಯ್ಯ ನೀನು?”
  “ಮೆನ್ನ.”
  “ಮೆನ್ನ?”
  “ಹುಚ್ಚ ಮೆನ್ನ. ಈ ಊರಿನವನೇ,”
  “ಹುಚ್ಚ ಮೆನ್ನ!” ಅವನಿಗೂ ಉಳಿದ ಅಂಬಿಗರಿಗೂ ನಗು.
   ಒಬ್ಬ ಗದರಿದ :
  “ಸಾಹುಕಾರರು ಮಲಗಿದ್ದಾರೆ. ಗಲಾಟೆ ಮಾಡ್ಬೇಡ. ಹೊರಠೋಗು.”
   ಪಿಸುದನಿಯಲ್ಲಿ ಮೆನ್ನನೆಂದ :
  “ನೀರಾನೆ ಪ್ರಾಂತಕ್ಕೆ ಸಂಬಂಧಿಸಿದ ಸುದ್ದಿ. ನಾನು ನಿಮ್ಮ ಸಾಹುಕಾರ್ರನ್ನು ತಕ್ಷಣ ಕಾಣ್ಬೇಕು.”
   ನೀರಾನೆಪ್ರಾಂತ ಎಂದೊಡನೆ  ಅಂಬಿಗರಲ್ಲಿ ಇಬ್ಬರು ಪರಸ್ಪರ ಮುಖ ನೋಡಿದರು. ಈತ ಹುಚ್ಚ ಎಂದು ತಾವೇನೋ ಉಪೇಕ್ಷೆ ಮಾಡಬಹುದು. ಆದರೆ ಕೆಫ್ಟು ತಮ್ಮನ್ನು ತರಾಟೆಗೆ ತೆಗೆದುಕೊಂಡರೊ?
   ತಮ್ಮ ಭಾಷೆಯಲ್ಲಿ ಅವರೇನನ್ನೋ ಚರ್ಚಿಸಿದರು. ಒಬ್ಬ ನಾವೆಗೆ ಮರಳಿದ. ಕೆಲ ಕ್ಷಣಗಳಲ್ಲೇ ಹಿಂದಿರುಗಿ, ಮೆನ್ನನನ್ನು ಕರೆದ.
   ಯಾವ ಊರಾದರೂ ಸರಿಯೆ, ಎಂಥ ಅಪರಾತ್ರಿಯಾದರೂ ಸರಿಯೆ, ದೋಣಿಕಟ್ಟೆ ಸವಿಾಪಿಸುವಾಗ ಕೆಫ್ಟುಗೆ ಎಚ್ಚರವಾಗುತ್ತಿತ್ತು. ಮೆಂಫಿಸ್ ತಲಪಿದಾಗಲೂ ಅಷ್ಟೆ, ಅವನು ಎದ್ದು ಕುಳಿತಿದ್ದ. ಸೆಡ್ ಉತ್ಸವ ಇನ್ನೂ ಜರಗಿಲ್ಲ ಎಂದು ಅವನಿಗೆ ಗೊತ್ತಾದುದು ಆನ ನಗರಿಯಲ್ಲಿ. ಗುರುಮನೆ-ಅರಮನೆ ವಿರಸದ ವಷಯವೂ ತಿಳಿಯಿತು; ಮಹಾ ಅರ್ಚಕ ರಾಜಧಾನಿಗೆ ವಾಪಸಾದ ಸಂಗತಿಯನ್ನು ಅಲ್ಲಿಯೇ ಆತ ಅರಿತ. ನೀರಾನೆ ಪ್ರಾಂತದ ನಾಯಕ ಮೆಂಫಿಸ್ ನಲ್ಲಿರುವನಂತೆ. ಪೆರೋ ಅವನನ್ನು ಕ್ಷಮಿಸಬಹುದೇ ? ತಾನು ಹೇಳಿ ಕೊಡಿಸಿದ ಆಮಂತ್ರಣ. ಇದರಿಂದ ಒಳ್ಳೆಯ ಪರಿಣಾಮ ಉಂಟಾದರೆ ತನಗೆ ಕೀರ್ತಿ. ವ್ಯಾಪಾರದ ದೃಷ್ಟಿಯಿಂದ ನೀರಾನೆ ಪ್ರಾಂತ ಪ್ರತ್ಯೇಕವಾಗಿ ಉಳಿದರೂ ನಷ್ಟವಿಲ್ಲ. ಬದಲು, ಲಾಭವೇ ಎನ್ನಬಹುದು.  ಆದರೆ ಆ ಮೆನೆಪ್ ಟಾನಿಗೆ ಏನಾದರೂ ಧಕ್ಕೆ ತಟ್ಟಿದರೊ? ಹಾಗಾಗಬಾರದು, ಹಾಗಾಗಬಾರದು.