ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
ಆನ್ ನಗರಿ ಬಿಟ್ಟ ಕ್ಷಣದಿಂದ ಅವನಿಗೆ ಅದೇ ಯೋಚನೆ. ಕೆಲ ತಾಸುಗಳ ಮಟ್ಟಿಗೆ ನಿದ್ದೆ ಆ ಯೋಚನೆಯನ್ನು ತಡೆಯೆತು. ಇಲ್ಲಿ ನೀರಾನೆ ಪ್ರಾಂತಕ್ಕೆ ಸಂಬಂಧಿಸಿ ಯಾವನೋ ತನ್ನೊಡನೆ ಮಾತನಾಡಲು ಬಯಸಿದಾಗ....
ಅವನು ಹುಚ್ಚನಿರಲಾರ ಎನಿಸಿತು, ಹೇಪಾಟ್ ನ ಆಕ್ರೋಶಕ್ಕೆ ಒಬ್ಬ ಯುವಕ ದೇವಸೇವಕ ತುತ್ತಾದ ಕಥೆಯನ್ನು ಕಳೆದ ಬಾರಿ ಮೆಂಫಿಸ್ ನಲ್ಲಿ ತಂಗಿದ್ದಾಗ ಕೇಳಿದ್ದ, ಆತನೆ ಇರಬಹುದೆ ಈ ಮೆನ್ನ?
ಅರೆತೆರೆದ ಎವೆಗಳೆಡೆಯಿಂದ ಮೆನ್ನನನ್ನು ನೋಡುತ್ತ ಅವನ ಮಾತು ಗಳಿಗೆ ಕೆಫ್ಟು ಕಿವಿಗೊಟ್ಟ.ಅವು ಒಳಗಿನ ಆತಂಕವನ್ನು ಹತ್ತಿಕ್ಕಿ, ವಯೋ ವೃದ್ಧನ ಸಂಯಮದಿಂದ ಆಡಿದ ಮಾತುಗಳು.
ಕೆಫ್ಟು ಕೇಳಿದ : “ಮಹಾ ಅರ್ಚಕರು ಒಮ್ಮೆ ಕೆಂಡ ಕಾರಿದ್ದು ನಿಮ್ಮ ಮೇಲೆಯೇ ಅಲ್ಲವಾ ?”
ಮೆನ್ನನ ದೃಷ್ಟಿಯಿಲ್ಲಿ ಈ ಲೋಕಸಂಚಾರಿ ಸರ್ವಜ್ಞ. ಮುಗುಳ್ನಗೆ ಬೀರಿ, "ನಾನೇ ಆ ಭಾಗ್ಯಶಾಲಿ," ಎಂದ. ಆತ ಹೇಳಿದುದನ್ನೆಲ್ಲ ನಂಬಲು ಬೇರೆ ಪ್ರಮಾಣ ಪತ್ರ ಕೆಫ್ಟುಗೆ ಬೇಕಿರಲ್ಲಿಲ್ಲ.
ಅತಿಥಿಗೃಹದ ಮೇಲಿನ ದಿಗ್ಬಂಧನಕ್ಕೆ ರಕ್ಷಣೆಗಿಂತಲೂ ಹೆಚ್ಚು ಪ್ರಬಲವಾದ ಬೇರೆ ಕಾರಣ ಇರಬೇಕು ಎನಿಸಿತು ವರ್ತಕನಿಗೆ ಆತ ಪ್ರಶ್ನಿಸಿದ : “ನೀರಾನೆ ಪ್ರಾಂತದ ನಾಯಕರಿಗೆ ಅಪಾಯ ಸಂಭವಿಸಬಹುದು ಅಂತೀರಾ?”
ಮೆನ್ನನ ಕಣ್ಣುಗಳಲ್ಲಿ ಕಂಬನಿ ತುಂಬಿತು. ಎವೆಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಆತ ಉತ್ತರಿಸಿದ :
“ಹೌದು. ಮಹಾ ಹಸುರು ಸಮುದ್ರದಿಂದ ನಿಮ್ಮ ನಾವೆ ಬರ್ತದೆ, ಬಂದ ತಕ್ಷಣ ನಿಮ್ಮನ್ನು ಕಾಣ್ಬೇಕು ಅಂತ ಮೆನೆಪ್ ಟಾ ಆಣ್ಣ ಅವತ್ತೇ ಹೇಳಿದ್ರು."