ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
ಅರಮನೆಗೆ ಧಾವಿಸಿದ, ವಣಿಕ ಮಿತ್ರನೊಬ್ಬ ಎರವಲು ನೀಡಿದ ಪಲ್ಲಕ್ಕಿಯಲ್ಲಿ ಕುಳಿತು.
ರಾಣಿ ನೆಫರ್ ಟೀಮ್ ಳ ಎದುರು ಕೆಫ್ಟು ಸಕಲ ಶಿಷ್ಟಾಚಾರಗಳ ಸಾಕಾರ ಮೂರ್ತಿ. ಒಮ್ಮೊಮ್ಮೆ ಆತ ತಲೆ ಎತ್ತಿ ನಸುನಗೆ ಬೀರುತ್ತಿದ್ದ, ಆದರೆ ಮಾತುಗಳ ನಡುವೆ ಅವನ ದೃಷ್ಟಿ ನೆಲದ ಮೇಲೆಯೇ ನೆಟ್ಟಿರುತ್ತಿತ್ತು. ನೆಫರ್ ಟೀಮ್ ತನ್ನ ಸಂತೋಷವನ್ನು ಮರೆಮಾಚಲಿಲ್ಲ.
“ನಿನ್ನೆಯಷ್ಟೇ ಜ್ಞಾಪಿಸ್ಕೊಂಡೆ. ಇವತ್ತು ಬಂದೇ ಬಿಟ್ಟಿರಿ!”
“ಆನ್ ನಗರಿಯಲ್ಲಿ ಒಂದು ಮೀನು ನೆಲಕ್ಕೆ ಹಾರಿ, ಬಡವ, ಮಹಾರಾಣಿ ನಿನ್ನನ್ನು ನೆನೆದ್ರು! ಅಂತ ಹೇಳ್ತು, ನೇರವಾಗಿ ಇಲ್ಲಿಗೆ ಬಂದೆ.....” ಎಂದ ಕೆಫ್ಟು, ತಲೆ ಬಾಗಿ ನಮಿಸಿ.
ಮುಗ್ಗಾಲುಪೀಠದ ಮೇಲಿರಿಸಿದ್ದ ಕಾಣಿಕೆ ತಟ್ಟೆಯತ್ತ ನೋಡಿ ನೆಫರ್ ಟೀಮ್ ಕೇಳಿದಳು: "ಏನೋ ತಂದಿರೋ ಹಾಗಿದೆ." “ಶಿರಸ್ಸಿಗೆ ಕೇಶ ಕವಚ, ಮಹಾರಾಣಿ,” ಎನ್ನುತ್ತ ಕೆಫ್ಟು ಕಾಣಿಕೆಯನ್ನು ಆವರಿಸಿದ್ದ ಹಳದಿ ಬಣ್ಣದ ನುಣುಪು ಬಟ್ಟೆಯನ್ನು ಎತ್ತಿದ.
ಸೆಡ್ ಉತ್ಸವದ ವೇಳೆಗೆ ಬೇಕಾಗುತ್ತದೆಂದು ರಾಜಧಾನಿಯಲ್ಲೇ ಒಂದೆರಡು ಕೇಶಕವಚಗಳನ್ನು ಮಹಾರಾಣಿ ಮಾಡಿಸಿದ್ದಳು. (ಪೆರೋನಿ ಗಾಗಿಯೂ ಒಂದೆರಡು ಸಿದ್ಧವಾಗಿದ್ದುವು.) ಕೆಫ್ಟು ಅತ್ಯಂತ ಜಾಗರೂಕತೆಯಿಂದ ಆ ಕವಚವನ್ನೆತ್ತಿ ಅದರ ಹಿಂಬದಿ ಕಾಣಿಸುವಂತೆ ಹಿಡಿದ . ಸಮೃದ್ಧ ಹೆರಳಿನ ಬೆಡಗುಗಾತಿ ಬೆನ್ನು ಹಾಕಿ ಕುಳಿತಿದ್ದಂತೆ ಕಂಡಿತು.
“ಓಹ್! ಎಷ್ಟು ಸೊಗಸಾಗಿದೆ!” ಎಂದಳು ಅರಸಿ.
ಕೆಫ್ಟು ಕವಚವನ್ನು ತಟ್ಟೆಯ ಮೇಲಿರಿಸಿದ. ನೆಫರ್ ಟೀಮ್ ಬಾಗಿ, ಆ ಕೂದಲಿನ ಮೇಲೆ ಕೈ ಆಡಿಸಿದಳು.
ಆಕೆಯ ದೃಷ್ಟಿಯನ್ನು ಸಂಧಿಸಿ ನಸುನಗೆ ಬೀರಿ, ಪುನಃ ಅವನತ ಶಿರನಾಗಿ ವರ್ತಕ ನುಡಿದ : “ಮಹಾರಾಣಿಯವರಿಗೆ ಇಷ್ಟವಾಯಿತಲ್ಲ-ನಾನು ಧನ್ಯ. ಇದು