ಪುಟ:Mrutyunjaya.pdf/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೪೨೧

      ಮಹಾರಾಣಿಯ ಮಾತುಗಳು ಗಂಡಾಂತರದ ಮುನ್ಸೂಚನೆಯನ್ನು ನೀಡಿದ್ದುವು. ರಾಣೀವಾಸದಿಂದ ಅಮಾತ್ಯಭವನಕ್ಕೆ ಹೋಗುತ್ತ, ಸದ್ಯ ದಲ್ಲೆ ಏನಾಗಬಹುದೆಂದನ್ನು ಕೆಫ್ಟು ತರ್ಕಿಸಿದ : ನೀರಾನೆ ಪ್ರಾಂತದ ಮೇಲೆ ದಂಡಯಾತ್ರೆ ನಡೆಯುವುದು ಖಂಡಿತ. ಮೆನೆಪ್ ಟಾನನ್ನು ಊರಿಗೆ ತೆರಳಲು ಬಿಡುವರೋ ಇಲ್ಲವೋ....
        ಅಮಾತ್ಯ ಕೆಫ್ಟು ಜತೆ ಬಹಳ ಎಚ್ಚರಿಕೆಯಿಂದ ಮಾತನಾಡಿದ, ಬಹಳ ನಯವಾಗಿ. ಕಳೆದ ಬಾರಿ ಕಂಡಿದ್ದ ಅಳುಕು ಈಗ ಇರಲಿಲ್ಲ....
        ಕುಶಲ ಪ್ರಶ್ನೆಗಳ ಬಳಿಕ ಆಮೆರಬ್ ಕೇಳಿದ:
        “ನಿಮ್ಮ ಸ್ನೇಹಿತ ಇಲ್ಲಿದ್ದಾನೆ.”
        “ಯಾರು? ಮೆನೆಪ್ ಟಾ ? ನನ್ನ ಹೊಸ ಗಿರಾಕಿ.”
        “ಹ್ಜ಼.ಹ್ಜ಼”
        “ಇಲ್ಲಿದ್ದಾನೇಂತ ಇವತ್ತು ತಾನೇ ಗೊತ್ತಾಯ್ತು.  ಅವನನ್ನು ನೋಡಿ ಹೋಗ್ತೇನೆ.”
         ಆಮೆರಬ್ ಕಣ್ಣೆವೆಗಳನ್ನು ಅರೆಮುಚ್ಚಿ ಯೋಚನೆಗಳಿಗೆ ತೆರೆ ಎಳೆದು, ಸ್ಪಷ್ಟವಾಗಿ ನುಡಿದ :
        “ಕೆಫ್ಟು ನೀವು ನಮಗೆ ಬಹಳ ಬೇಕಾದವರು. ಮೆನೆಪ್ ಟಾನ ಭೇಟಿಗೆ ನೀವು ಹೋದರೆ, ಮಹಾಪ್ರಭುವಿನ ಮನಸ್ಸಿಗೆ ನೋವಾಗ್ತದೆ.”
        “ಮಹಾಪ್ರಭುವಿಗೊ? ಮಹಾ ಅರ್ಚಕರಿಗೊ?”
        “ಹ್ಯಾಗೆ ಬೇಕಾದರೂ ತಿಳಕೊಳ್ಳಿ.”
        “ಇಂಥ ವಿಷಯದಲ್ಲಿ ಅಮಾತ್ಯರು ಅಸಹಾಯರು ಅಂತಲೆ?"
        “ದೇಶದ ಹಿತದೃಷ್ಟಿಯಿಂದ ಇದು ನಾನೇ ಹೊರಿಸಿರೋ ನಿರ್ಬಂಧ, ಕೆಫ್ಟು.”
        “ನನಗೊಬ್ಬ ಗಿರಾಕಿ ಕಡಿಮೆಯಾದ ಹಾಗಾಯ್ತು !”
        “ಹಹ್ಹ” ಎಂದು ನಕ್ಕು ಆಮೆರಬ್ ಮಾತು ಬದಲಿಸಿದ. “ಅಸ್ಸೀರಿಯದ ದೊರೆಯನ್ನು ಕಂಡಿದ್ದಿರಾ?”
       “ಹೌದು. ಹತ್ತು ದಿನಾ ಅವರ ಆತಿಥ್ಯ ಸ್ವೀಕರಿಸಿದೆ. ವಾಣಿಜ್ಯಾಭಿ ವೃದ್ಧಿಯಾಗಿದೆ. ಜನರ ಸಂಪತ್ತು ಹೆಚ್ಚಿದೆ. ಅವರು ಯುದ್ಧಾತುರರಾಗಿಲ್ಲ.