ಪುಟ:Mrutyunjaya.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೩೩

ದಿಬ್ಬದ ಮೇಲಿನ ಅನುಭವಿ ಯಾತ್ರಿಕ ಮುಂದುವರಿದ :
"ಮಂದಿರದಿಂದ ಗೋರಿಗೆ ಕೂಗಳತೆ ದೂರ. ನಾಲ್ಕು ಮೊಳ ಅಗಲದ
ಹಾಸುಗಲ್ಲು ದಾರಿ. ಅದರ ಮೇಲೆ ಎಳೀಬೇಕು. ಆ ಕಡೆಯ ಈ ಕಡೆಯ
ಜನಸನಮ್ಮರ್ದವೊ....ನಾನು ಗಾಯಕನಾಗಿದ್ದರೆ ಬಣ್ಣಿಸ್ತಿದ್ದೆ. ನೋಡಿ !
ಬಂದು ನೀವೇ ನೋಡಿ !"

****

ಹಲವು ಸಹಸ್ರ ಜನ ಸಾಗಿದ ಮೇಲೆ, ಹಾಸುಗಲ್ಲಿನ ದಾರಿಯಲ್ಲಿ, ಬಗೆ
ಬಗೆಯ ಭಕ್ಷ್ಯ ಭೋಜ್ಯ ತುಂಬಿದ್ದ ಜಾಡಿಗಳನ್ನು ಸೇವಕರು ಹೊತ್ತು
ತಂದರು. ಇದು ಒಸೈರಿಸನಿಗೆ. ಆ ಲೋಕದ ಬುತ್ತಿ (ಒಂದು ವರ್ಷಕ್ಕಾ
ಗುವಷ್ಟು). ಅನಂತರ ಮರದ ಪೆಟಾರಿಗಳನ್ನು ಹೊತ್ತ ಸೇವಕರು. ಆ
ಪೆಟಾರಿಗಳಲ್ಲಿ ಒಸೈರಿಸನ ಆಭರಣಗಳು, ಉಡುಪುಗಳು. ಅವರ ಹಿಂದೆ, ಅಧಿಕಾರ
ದಂಡ ಹಿಡಿದ ಮಹಾಅರ್ಚಕ. ಆತನ ಹಿಂದೆ, ಇಬ್ಬರು ಕಿರಿಯ ದೇವಸೇವಕರು
ಎಳೆಯುತ್ತಿದ್ದ ಜಾರು ಬಂಡಿ. ಅದರಲ್ಲಿ ಒಸೈರಿಸನ ಮೆದುಳು ಶ್ವಾಸಕೋಶ
ಕರುಳು ಇರಿಸಿದ್ದ, ಮೇಲ್ಕಟ್ಟು ಕಟ್ಟಿದ, ಜಾಡಿಗಳು. ಆ ಜಾರು ಬಂಡಿಯ ಹಿಂದೆ
ಇನ್ನೊಂದು ನೀಳವಾದ ಜಾರು ಬಂಡಿ. ಅದರಲ್ಲಿ, ಒಸೈರಿಸನ ಶವಪೆಟ್ಟಿಗೆಯನ್ನು
ಹೊತ್ತ ಮಂಚ. ಅದಕ್ಕೊಂದು ಮೇಲ್ಚಪ್ಪರ. ತಲೆಗೆ ಸಮೀಪದಲ್ಲಿ ಮಂಚದ
ಮಗ್ಗುಲಲ್ಲಿ ಸಾಗಿದ್ದಳು ಐಸಿಸ್‌___ದುಃಖಿನಿ. ಆಕೆಗೆ ತಗಲಿಕೊಂಡು ಶೋಕ
ಸ್ತ್ರೀಯರು ಒಸೈರಿಸನ ಪಾದದ ಬಳಿ, ಜಾರು ಬಂಡಿಯ ಪಕ್ಕದಲ್ಲಿ ಕಿರೀಟ
ಧಾರಿ ಸರ್ವಾಲಂಕೃತ ಪೆರೋ. ಆತನಿಗೆ ಅಂಟಿಕೊಂಡು ಅಂಗರಕ್ಷಕರು.
ಅವರ ಹಿಂದೆ ಭೂಮಾಲಿಕರು. ಕಿರಿಯ ದೇವಸೇವಕರು ಜಾರು ಬಂಡಿಯನ್ನು
ಎಳೆಯುತ್ತಿದ್ದರು. ಅದನ್ನು ಹಿಂಬಾಲಿಸಿ ಬಂತು ಬರಿಯ ರಾಜ ಪಲ್ಲಕಿ.
ಹೊತ್ತಿದ್ದವರು ದಾಸಜನ. ಬಳಿಕ ಅರಸನ ಯೋಧರು. ಅವರ ಹಿಂದೆ
ಒತ್ತಿಕೊಂಡು ಬರುತ್ತಿದ್ದ ಗುಲ್ಲು ಗದ್ದಲದ ಜನಸಮುದಾಯ.
ಉದ್ದಕ್ಕೂ ಸಹಸ್ರಾರು ಕಂಠಗಳಿಂದ ಅಲೆಯಲೆಯಾಗಿ ಏಳುತ್ತಿತ್ತು ಪ್ರಲಾಪ.
" ಓ ಒಸೈರಿಸ್, ಓ ಒಸೈರಿಸ್.... "
ಬಾಲ ಬಾಯಿ ಕಾಣಿಸದ ಹೆಬ್ಬಾವಿನಂತೆ ತೆವಳುತ್ತ ಸಾಗಿತು ಮೆರವಣಿಗೆ.
ದಿಬ್ಬದ ಬಳಿ ಬಂದಾಗ ಮೆನೆಪ್ಟಾನ ಸಂಗಡಿಗರೂ ಆಲಾಪನೆಯಲ್ಲಿ
ಭಾಗಿಗಳಾದರು :