ಈ ಪುಟವನ್ನು ಪರಿಶೀಲಿಸಲಾಗಿದೆ
ಇವನು ಯಾವಾಗ ಬರೆಯಲು ಕಲಿತ ಎಂದು ಬಟಾನಿಗೆ ಅಚ್ಚರಿ. ಅವನ ಅಂಬಿಗರು ಬೆರಗಾಗಿ ಆ ಎಳೆಯನನ್ನು ನೋಡಿದರು.
ಊರೊಳಗೆ ಧಾವಿಸುವ ಆತುರದಲ್ಲಿದ್ದರೂ ಬಟಾ ಆತನನ್ನು ಕೇಳಿದ: "ಅದೇನು ಲೆಕ್ಕ ಬರೆದಿದ್ದೀಯೋ ನೋಡೋಣ." ಆತ ಲಿಪಿಸುರುಳಿಯನ್ನು ತಂದ. ಎರಡು ಭಾಗ ಮಾಡಿ ತುಂಡು ಗೆರೆಗಳನ್ನು ಮೂಡಿಸಿದ್ದ. ಬಂದ ದೋಣಿಗೊಂದು ಗೆರೆ, ಹೋದ ದೋಣಿಗೊಂದು. "ಭೇಷ್! ಈ ಲಿಪಿ ನಾನೂ ಕಲೀಬೌದು,"ಎಂದ ಬಟಾ. ನಾಯಕ ಬರಲಿಲ್ಲವೆ ಎಂದು ಕೇಳುವ ಆಸೆ ಆ ಯುವಕಗೆ. ಆದರೆ ಬಾಯಿ ಬಿಡಲಾರ. ಕುತೂಹಲದ ಎಲ್ಲ ಪ್ರಶ್ನೆಗಳಿಗೂ ಮುಂಚಿತವಾಗಿಯೇ ಬಟಾ ಉತ್ತರ ನೀಡಿದ: "ನಾವು ಐದಾರು ದಿನಗಳ ಮಟ್ಟಿಗೆ ಬಂದಿದ್ದೇವೆ. ನಾಯಕರನ್ನು ಕರಕೊಂಡು ಬರೋಕೆ ಪುನಃ ಹೋಗ್ಬೇಕು. ಲೆಕ್ಕ ಇಡೋ ಕೆಲಸ ನೀನು ಮುಂದುವರಿಸು. ಊರಲ್ಲೆಲ್ಲ ಚೆನ್ನಾಗಿದ್ದಾರಾ?" ಎಡಗೈಯಲ್ಲಿ ಬಟ್ಟೆ ಸುತ್ತಿದ ಥೊಎರಿಸ್ ಮೂರ್ತಿ,ಕಂಕುಳಲ್ಲಿ ಕೊಳಲು ದಾಪುಗಾಲಿಡುತ್ತ ಬಟಾ ನಡೆದ. "ಹೂಂ. ಹೂಂ....” ಕ್ಷೀಣಸದ್ದು ಅವನನ್ನು ಹಿಂಬಾಲಿಸಿತು. ನೇರವಾಗಿ ಸ್ನೋಫ್ರುವಿನ ಮನೆಗೆ ಹೋಗಬೇಕೆಂದು ಬಟಾ ಉದ್ದೇಶಿಸಿದ್ದ.
ಮುಖ್ಯ ಬೀದಿ ಆರಂಭವಾಗುವಲ್ಲಿ ಜನ ಅವನನ್ನು ಕಂಡರು. ಅವನಿಗಿಂತ ಮುಂಚೆಯೇ, ಬಟಾ ಬಂದನೆಂಬ ಸುದ್ದಿ ಹಾರುವ ಹಕ್ಕಿಯಾಯಿತು. ಸೂರ್ಯನಾಗಲೇ ಎರಡು ಮಾರು ಮೇಲಕ್ಕೆ ಏರಿದ್ದ. ಕಿರಣಗಳು ಪ್ರಖರವಾಗಿದ್ದವು. ಕುಶಲಕರ್ಮಿಗಳ ಮನೆಗಳಿಂದ ದುಡಿಮೆಯ ಸದ್ದು ಕೇಳಿಸುತ್ತಿತ್ತು. ರೈತರ ಮನೆಗಳ ಸ್ವಚ್ಛ ಅಂಗಳಗಳು ಪೈರನ್ನು ಸ್ವಾಗತಿಸಲು ಅಣಿಯಾಗಿದ್ದುವು.'ಎಲ್ಲ ಎಷ್ಟೊಂದು ಚೊಕ್ಕಟವಾಗಿದೆ! ನನ್ನೂರು ಇಷ್ಟು ಸೊಗಸಾಗಿ ಯಾವತ್ತೂ ಕಂಡಿರಲಿಲ್ಲ,' ಎಂದುಕೊಳ್ಳುತ್ತ ಬಟಾ ತನ್ನನ್ನು ಇದಿರ್ಗೊಂಡವರಿಗೆಲ್ಲ ಆತ್ಮೀಯತೆಯಿಂದ ಕೈಬೀಸಿದ.
ಆತ ನಿಲ್ಲುತ್ತಿಲ್ಲವಲ್ಲ ಎಂದು ಜನರಿಗೆ ಕಸಿವಿಸಿ. "ನಿಲ್ಲಪ್ಪೋ" ಎನ್ನುತ್ತ