ಈ ಪುಟವನ್ನು ಪರಿಶೀಲಿಸಲಾಗಿದೆ
ಹಲವರು ಅವನನ್ನು ಅಡ್ಡಗಟ್ಟಿದರು.
"ನಾಯಕರು ಬಂದರಾ? ಔಟ_ಬೆಕ್ ಬರಲಿಲ್ಲವಾ ? ನೀನೊಬ್ಬನೇ ಯಾಕ್ಬಂದೆ ತಿರ್ಗಾ ಹೋಗ್ತೀಯಾ?" ಇವನೂ ಪ್ರಶ್ನೆ ಕೇಳಿದ: "ನಾವೆಲ್ಲ ಚೆನ್ನಾಗಿದ್ದೇವೇಂತ ಸುದ್ದಿ ಹೇಳಿ ಕಳಿಸಿದ್ದೆ ; ಸುದ್ದಿ ಬಂತಾ?" "ಹೂಂ ಹೂಂ. ಮಹಾ ಸುದ್ದಿ....ನೀನು ಹೇಳು, ನೀನು ಹೇಳು." ದಾರಿಯಲ್ಲಿ ನಿಂತರೆ ಆದೀತೇ ಕೆಲಸ ? ಬಟಾ ಸ್ನೊಫ್ರುವಿನ ಮನೆಯತ್ತ ಧಾವಿಸಿದ ಸ್ನೊಫ್ರುವಿನ ಮನೆ ತಲಪುವವರೆಗೂ ಬೀದಿಯುದ್ದಕ್ಕೂ ಜನ. ಮನೆಯೊಳಕ್ಕೆ ಕಾಲಿರಿಸಿದಾಗ 'ಅಬ್ಬ! ಪಾರಾದೆ'! ಎನಿಸಿತು. ಆದರೆ ಆ ಭಾವನೆಗಿದ್ದ ಆಯುಸ್ಸು ಒಂದೇ ಕ್ಷಣ. ಜನ ನುಗ್ಗಿದರು. ಒಳಗಿನ ಸ್ಥಳ ಸಾಲದೆ ಹೊರಗೂ ಸಂದಣಿ ನೆರೆಯಿತು. ಕಲರವವನ್ನು ಮೀರಿಸಿ ದಳಪತಿಯ ಗಂಟಲು ಕೇಳಿಸಿತು: "ಶಿಸ್ತು ! ಶಿಸ್ತು ಮರೀಬೇಡಿ !" ಕ್ಷಣ ಮೌನ. ಬಳಿಕ ಒಂದು ಧ್ವನಿ. "ವಿಷಯವೆಲ್ಲಾ ಬಟಾ ತಿಳಿಸ್ಲಿ. ಕೇಳ್ಕೊಂಡು ಹೊರಟ್ಹೋಗ್ತೇವೆ." ಅದಕ್ಕೆ ಹಲವು ಕಂಠಗಳ ಬೆಂಬಲ. "ಹೌದು, ಹೌದು." ಖ್ನೆಮ್‍ಹೊಟೆಪ್ ದಾರಿಮಾಡಿಕೊಂಡು, ಒಳಗೆ ಸ್ನೊಫ್ರುವಿನ ಮಗ್ಗುಲಲ್ಲಿ ನಿಂತಿದ್ದ ಬಟಾನೆಡೆಗೆ ಸಾಗಿ ಪ್ರೀತಿಯಿಂದ ಅವನ ತೋಳು ಮುಟ್ಟಿದ. "ಜನರಿಗೇನಾದರೂ ಹೇಳಪ್ಪ ಬಟಾ," ಎಂದು ಸ್ನೊಫ್ರು. "ಸೆತ್ ನನ್ಮಗಂದು. ಇದು ಚೆನ್ನಾಗಿದೆ," ಎಂದು, ಸುತ್ತಲೂ ಇದ್ದವರಿಗೆ ಕೇಳಿಸುವಂತೆ, ಬಟಾ ಗೊಣಗಿದ. ಬಳಿಕ ಇದ್ದಕ್ಕಿದ್ದಂತೆ, ಅರ್ಚಕ ಅಪೆಟ್‍ನ ಹಾಗೆ ಆಶೀರ್ವದಿಸುವ ಭಂಗಿಯಲ್ಲಿ ತೋಳನ್ನೆತ್ತಿದ. ಒಂದೇ ಕ್ಷಣದಲ್ಲಿ ಜನರಿಗೆ ಅರ್ಥವಾಯಿತು. ಹಲವರು ಒಟ್ಟಿಗೆ "ಹೊಹ್ಹೋ !" ಎಂದು ನಕ್ಕರು. "ಥೂ ನಿಮ್ಮ! ನಮಸ್ಕಾರ ಮಾಡೋದ್ಬಿಟ್ಟು ನಗ್ತೀರಾ?" ಎಂದು