ಪುಟ:Mrutyunjaya.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ೩೫

ಕೊಂಡು ಮುಖ್ಯ ದೇವಸೇವಕ ಆವೆಮಣ್ಣಿನ ಮುದ್ರೆ ಒತ್ತುತ್ತಾನೆ. ನಾಳೆಯೇ ఆ ಅಂಕಣದಲ್ಲಿರೋ ಸಾಮಾನುಗಳೆಲ್ಲ ಮಂದಿರಕ್ಕೆ ವಾಪಸು. ದೇವಸೇವಕನೂ ಸಾಮಾನ್ಯ ಸೇವಕರೂ ಒಟ್ಟಿಗೆ ದರದರ ಎಳಕೊಂಡು ಹೋಗ್ತಾರೆ. ಅದನ್ನೆಲ್ಲ ನೋಡೋದಕ್ಕೆ ಇರೋದು ಈ ಊರಿನ ಸೋಮಾರಿಗಳು ಮಾತ್ರ...ನಾಳೆ ಯಿಂದ ಹೊರಗಿನ ಬಾಗಿಲಿಗೆ ಮುದ್ರೆ ఒತ್ತೋದು, ಮುಂದಿನ ನರ್ಷ ಉತ್ಸವದ ಹಿಂದಿನ ದಿವಸ. ಅಷ್ಟರವರೆಗೆ ಹೊರ ಅಂಕಣದಲ್ಲಿ ಪೋಲಿ ಹುಡುಗರು ಬಚಿಟ್ಕೊಳ್ಳೋ ಆಟ ಆಡ್ತಾರೆ. ಕಳ್ಳಕಾಕರು ರಾತ್ರಿ ಒಮ್ಮೊಮ್ಮೆ ಆಶ್ರಯ ಪಡೀತಾರೆ. ಇನ್ನೂ ಒಮ್ಮೊಮ್ಮೆ ಹೆತ್ತವರ ಮಾತು ಕೇಳದ ಹುಡುಗ ಹುಡುಗೀರು..... ಗೊತ್ತಲ್ಲ ನಿಮಗೆ ?.... ಮುಚ್ಚಂಜೆ ಆಗೇ ಬಿಡ್ತು.... ನಾನು ಪಾಪಿ. ಏನೇನೋ ಹೆಳ್ತಿದ್ದೇನೆ. ಒಸೈರಿಸ್ ಕ್ಷಮಿಸ್ಲಿ, ರಾ ಕ್ಷಮಿಸ್ಲಿ ನೋಡಿ ! ಸೆರೋ_"

     *        *        *       *      

ಪೆರೋ ಗೋರಿಯ ಪಾವಟಿಗೆಗಳನ್ನು ಹತ್ತಿ ಶಿರಭಾಗದಲ್ಲಿದ್ದ ಸಮ ತಟ್ಟು ಸ್ಥಳದ ಮೇಲೆ ನಿಂತ. ಅವನ ಹಿಂದೆಯೇ ಮಹಾ ಅರ್ಚಕನೂ ಏರಿ ಬಂದ. ಪಶ್ಚಿಮದ ಮರಳುಗಾಡಿನಾಚೆಗೆ ಸೂರ್ಯ ಮುಳುಡತೊಡಗಿದ. ಕಿರಣ ಗಳು ನೇರ ಗೆರೆಗಳಾಗಿ, ಭೂಮಿಯ ಮೇಲೆ ಬಂಗಾರದ ಬಣ್ಣ ಚೆಲ್ಲಿದುವು. ಪೆರೋ ಪೇಪಿ ನೆಟ್ಟಗೆ ನಿಂತು, ತೋಳುಗಳನ್ನು ಸೂರ್ಯನೆಡೆಗೆ ಚಾಚಿ

“ ರಾ   ರಾ   ರಾ ....” ಎಂದ. 

ಮಹಾ ಅರ್ಚಕ ಹೇಪಾಟ್ ತಾನೂ ಹಾಗೆಯೇ ಮಾಡಿದ. ಇದ್ದಕ್ಕಿದ್ದಂತೆ ಸೂರ್ಯ ಮುಳುಗಿದ. ಕತ್ತಲು ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತ ಬಂದ, ಕೆಲವೇ ಕ್ಷಣಗಳಲ್ಲಿ ಅಬ್ವುವನ್ನು ಆವರಿಸಿ ದಟ್ಟ ವಾಯಿತು. ನದೀ ತಟದಿಂದ ಗುಡ್ಡದವರೆಗಿನ ದಾರಿಯುದ್ದಕ್ಕೂ ನಿಗಿನಿಗಿ ಕೆಂಡ ವನ್ನು ರಾಚಿದಂತೆ ಪಂಜು ಬೆಳಕಿನ ಚುಕ್ಕೆಗಳು ಕಾಣಿಸಿಕೊಂಡವು. ಪೆಪೈರಸ್ ದಂಟನ್ನು ಜಜ್ಜಿ ಒಣಗಿಸಿ ನಾರಗಸೆ ಎಣ್ಣೆಯಲ್ಲಿ ಅದ್ದಿ ಉರಿಸುತ್ತಿದ್ದ ದೀವಟಗೆ. ಗೋರಿಯ ಬಳಿಯಲ್ಲಂತೂ ಸಹಸ್ರಾರು ಪಂಜುಗಳು ಉರಿಯತೊಡಗಿದುವು.