ಪುಟ:Mrutyunjaya.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೬ ಮೃತ್ಯುಂಜಯ

ದೇಗುಲದ ಬಳಿಯಲ್ಲೂ ಅಂಥದೇ ಬೆಳಗು. " ದಾರಿ ಬಿಡಿ ! ಎಲ್ಲರೂ ಪಕ್ಕಕ್ಕೆ ಸರೀರಿ ! ಪೆರೋ ರಾಜಧಾನಿಗೆ ಪ್ರವಾಸ ಹೊರಡ್ತಾರೆ!” (ಪಂಜುಗಳ ಬೆಳಕಿನಲ್ಲಿ ಜಾಜ್ಜಜ್ವಲ್ಯಮಾನವಾಗಿ ಕಾಣಿಸುತ್ತಿದು ವು-ರಾಜ ನಾವೆ ಮತ್ತು ನೀಲ ನದಿಯ ದೋಣಿಕಟ್ಟೆ) ಮೆರವಣಿಗೆಯಲ್ಲಿ ಪೆರೋ ನಿರ್ಗಮನ. ಪಂಜುಗಳನ್ನು ಹಿಡಿದ ಕರಿಯ ಭಟರು, ತುತೂರಿಯವರು, ಗದಾಧಾರಿಗಳಾದ ನೂರು ಜನ ಅಂಗರಕ್ಷಕರು (ಅವರ ಕೈಗಳಲ್ಲಾ ಅಲ್ಲಿ ಇಲ್ಲಿ ಪಂಜು) ಮಗ್ಗುಲಲ್ಲಿ ಆ ದಳದ ನಾಯಕ, ಬಳಿಕ ಅರಸನ ಪಲ್ಲಕಿ. ಪಲ್ಲಕಿಯಲ್ಲಿ ಪೆರೋ, ಹೊತ್ತಿದ್ದ ಕೃಪಾಪಾತ್ರ ಭೂಮಾಲಿಕರ ಆಢ್ಯರು, ಆ ಕಡೆ ಈ ಕಡೆ ಚಾಮರ ಸೇವೆಯವರು____ಪಂಜಿ ನವರು, ಮತ್ತೆ ನೂರು ಜನ ಕಾವಲು ಭಟರು_____ಪಕ್ಕದಲ್ಲಿ ಅವರ ಮುಖ್ಯಸ್ಥ. ಬಳಿಕ ಕತ್ತಲಲ್ಲಿ, ಜೀವಂತ ದೇವರಾಜ ಪೆರೋನ ಮೆರವಣಿಗೆಯನ್ನು ಹಿಂಬಾ ಲಿಸುತ್ತಿದ್ದ ಪ್ರಜಾಸ್ತೋಮ. ಮಹಾ ಅರ್ಚಕ ಹೇಪಾಟ್ ಪಂಜು ಬೆಳಕಿನಲ್ಲಿ ತನ್ನ ಪರಿವಾರದೊಡನೆ ದೇನ ಮಂದಿರಕ್ಕೆ ಹೊರಟ. ಮೆನೆಪ್‌ಟಾನೂ ಸಹ ಯಾತ್ರಿಕರೂ ಬೆಳಕಿಲ್ಲದ ಸನ್ನಿವೇಶದಲ್ಲಿ ಗುಂಪು ಚೆದರಿ ಹೋಗದಂತೆ ಎಚ್ಚರ ವಹಿಸುತ್ತ ದಿಬ್ಬ ಇಳಿದರು. ಮಂದಿರದಲ್ಲಿ ದೀಪಗಳು ಉರಿಯುತ್ತಿದ್ದುವು. ಐಸಿಸ್ ತನ್ನ ವಸತಿಗೆ ತೆರಳುವುದಕ್ಕೆ ಮುನ್ನ ಗರ್ಭಗುಡಿಯ ಮುಂದೆ ನಿಂತು ಬಾಗಿಲ ಹಿಂದಿದ್ದ ದೇವತಾಮೂರ್ತಿಗೆ ನಮಿಸಬೇಕು. ಅವಳು ಸಾಷ್ಟಾಂಗ ಪ್ರಣಾಮ ಮಾಡಿ, ಏಳದೇ ಆ ಭಂಗಿಯಲ್ಲೇ ಇದ್ದಳು, ಕಾಯುತ್ತ. ಟಪ್ ಟಪ್ ಹಾವುಗೆಗಳ ಸದ್ದು, ಹತ್ತಿರ ಬಂದು ಅದು ಸ್ತಬ್ಧವಾಯಿತು. ಹೇಪಾಟನ ಧ್ವನಿ : "ಏಳು. ಅಭಿನಯ ಅದ್ಭುತವಾಗಿತ್ತು.” ಹಿಂದೆಯೂ ಕೇಳಿದ್ದ ಪ್ರಶಂಸೆ. ಹೆಚ್ಚಿನ ಮೆಚ್ಚುಗೆಗೆ ಪೀಠಿಕೆ. ದೇವಸೇವಕಿ ಏಳುತ್ತಿದ್ದಂತೆ ಹೇಪಾಟನ ಗರ್ಜನೆ ಕೇಳಿ ಬಂತು :