ಪುಟ:Mrutyunjaya.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೮ ಮೃತ್ಯುಂಜಯ

ಗುಂಗಿನಲ್ಲಿ ಅವರು ನಡೆದರು. ಬಹಳ ಮಟ್ಟಿಗೆ ಮಾತೇ ಇಲ್ಲದ ನಡಿಗೆ, ಅವರದು, ಅವರ ಗುಂಪಿನದು, ಉಳಿದೆಲ್ಲರದು. ರಸ್ತೆಯ ಬದಿಗಳಲ್ಲಿ ಎಷ್ಟೋ ಅಂಗಡಿಗಳಿದ್ದ ಜಾಗ ಬರಿದಾಗಿತ್ತು. ಕತ್ತ ಲಾದುದಕ್ಕೆ ಮುಂಚೆಯೇ ಅವರು ಗೂಡಾರ ಕಿತ್ತಿರಬೇಕು. ಕೆಲವರಷ್ಟೆ ಪಂಜು ಉರಿಸಿ, ಕೊನೆಯ ವ್ಯಾಪಾರಕ್ಕೆ ಗಿರಾಕಿಗಳು ಬರಬಹುದೇನೋ ಎಂದು ಕಾದಿದ್ದರು. ಅಲ್ಲಿ ಇಲ್ಲಿ ಒಡೆದ ಗಂಟಲಿನ, ಕುಗ್ಗಿ ಹೋದ ಧ್ವನಿಗಳು ಗ್ರಾಹಕರನ್ನು ಕರೆಯುತ್ತಿದ್ದುವು. ತಾಯತ ಮಾರುತ್ತಿದ್ದ ದೇವಸೇವಕ ಕೂಗುತ್ತಿದ್ದ : "ತಾಯತ ತಗೊಂಡೊಗಿ ! ಕೊನೇ ಅವಕಾಶ !" ಲಿಪಿ ಸುರುಳಿ ಕೊಂಡ ಸ್ಥಳ ಹತ್ತಿರ ಬಂತೆಂದು ಮೆನೆಪ್‌ಟಾ ಲಕ್ಷ್ಯ ಪೂರ್ವಕವಾಗಿ ನೋಡಿದ. ಅಲ್ಲಿ ಪಂಜು ಇರಲಿಲ್ಲ ; ಲಿಪಿಕಾರನೂ ಇರಲಿಲ್ಲ.

                        *            *            *            * 

ದೋಣಿಕಟ್ಟೆಯ ಬಳಿ ಗದ್ದಲವೋ ಗದ್ದಲ. ರಾಜಭಟರ ಅಬ್ಬರವಿರ ಲಿಲ್ಲ. (" ರಾಜನಾವೆ ಹೊರಟ್ಟೋದ್ಯೆಲೆ ಅವರಿಗೇನು ಕೆಲಸ ? ಎದ್ದೇ ಬಿಟ್ಟಿದ್ದಾರೆ ಪುಣ್ಯಾತ್ಮರು !”) ಹಲವಾರು ದೋಣಿಗಳು ಕಟ್ಟೆಗೆ ಬಂದು ತಮ್ಮ ವರನ್ನು ಒಯ್ಯಲು ಯತ್ನಿಸುತ್ತಿದ್ದುವು. ದೋಣಿಕಟ್ಟೆಯ ಒಬ್ಬನೇ ಒಬ್ಬ ವೃದ್ಧ ನೌಕರ ಅಸ್ಪಷ್ಟ ಪದಗಳನ್ನು ಗೊಣಗುತ್ತ, ಮಂದವಾಗುತ್ತಿದ್ದ ಪಂಜು ಗಳನ್ನು ಎಣ್ಣೆಯಿಂದ ತೋಯಿಸುತ್ತಿದ್ದ. ಯಾರೋ ಅಂದರು : “ ನೀನೂ ಹೋಗಿ ಮಲಕ್ಕೋ ತಾತ....” " ಮಲಕ್ಕೋತೇನೆ! ಕತ್ತಲೇಲಿ ದೋಣಿಗಳು ಢಿಕ್ಕಿ ಹೊಡೆದು ಮುಳುಗಿದ್ರೆ ನನ್ನ ತಲೆ ತೆಗೀತಾರಿ ನಾಳೆ ! ಅಷ್ಟು ಅವಸರಾಂತಾದ್ರೆ ನೀನು ಮಲಕ್ಕೋ! ಆದರೆ ಎಲ್ಲಿ? ಯಾರ ಜತೆ ?..” ......ನೀರಾನೆ ಪ್ರಾಂತದ ನಾಲ್ವರು ಯಾತ್ರಿಕರು ಅಂಬಿಗ ಬಟಾ ಹೇಳಿದ್ದ ಕಡೆಗೆ ಕಟ್ಟೆ ಉದ್ದಕ್ಕೂ ನಡೆದು ಹೋದರು. ಸಹಸ್ರ ತೆಪ್ಪಗಳು, ಚಿಕ್ಕಪುಟ್ಟ ದೋಣಿಗಳು ಮಣ್ಣಿನ ಬುಡ್ಡಿಗಳ ರಕ್ಷಿತ ಎಣ್ಣೆ ದೀಪಗಳನ್ನು ತೇಲಿ