ಪುಟ:Mrutyunjaya.pdf/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೮೭ ಅಂಥವರಿಂದ ಪೆರೋನ ಧವಳಕೀರ್ತಿಗೆ ಕಳಂಕ. ಆ ಅಪರಾಧಿಗಳು ದೇವರ ದಂಡನೆಗೆ ಅರ್ಹರು. ಅವರಿಗೆ ಶಿಕ್ಷೆ ನೀಡದೆ ದೊರೆಯನ್ನು ದೂರುವುದು ಮೂರ್ಖತನ. ಅಂಥ ನಿಂದಕರು ನಮ್ಮ ಭರ್ತ್ಸನೆಗೆ ಪಾತ್ರರು. ವಿದ್ರೋಹಿಗಳ ವಿನಾಶ, ಸ್ವಾಮಿನಿಷ್ಕರ ಸಂರಕ್ಷಣೆ-ಇದು ನಮ್ಮ ದೊರೆ ಅನುಸರಿಸುವ ಪವಿತ್ರ ನೀತಿ....” ಕ್ಷಣ ತಡೆದು ಹೇಪಾಟ್ ಧ್ವನಿ ಬದಲಿಸಿ ನುಡಿದ: "ಈಗ ಪೆರೊ ಮಹಾಮಂದಿರಕ್ಕೆ ಸೆಡ್ ಉತ್ಸವದ ವಿಶೇಷ ಕಾಣಿಕೆ ಜಾಹೀರುಮಾಡ್ತಾರೆ.” ಇದು ಅನಿರ್ಬಂದಿತ ದರೋಡೆ ಎನಿಸಿತು ಪೆರೋಗೆ. ಪಿಸುದನಿಯಲ್ಲಿ ಮಹಾ ಅರ್ಚಕನೆಂದ: “ಸುಮ್ಮನಿದ್ದೀರಲ್ಲ. ಹೇಳಿಬಿಡಿ.” ನೆಫರ್ ಟೀಮ್ ತನ್ನ ಕಡೆಗೆ ನೋಡುತ್ತಿದ್ದಂತೆ ಪೆರೋ ಮೆಲುದನಿಯಲ್ಲಿ ಹೇಳಿದ. “ಒಂದು ಸಹಸ್ರ ದಾಸದಾಸಿಯರು ; ಒಂದು ಸಹಸ್ರ ದೆಬೆನ್ ಬ೦ಗಾರ.” ಹೇಪಾಟ್ ಮೂಗು ಕುಣಿಸಿದ. “ಹುಂ” ಎಂದ. ಎಲ್ಲರಿಗೂ ಕೇಳಿ ಸುವಂತೆ ಗಟ್ಟಿಯಾಗಿ ಸಾರಿದ : “ನಾವು ಹೆಮ್ಮೆ ಪಡುವಂಥ ದೇವರೂಪ ಮಹಾಮಂದಿರಕ್ಕೆ ಕಾಣಿಕೆ ಜಾಹೀರು ಮಾಡಿದ್ದಾರೆ: ಹತ್ತು ಸಹಸ್ರ ದಾಸದಾಸಿಯರು ; ಹತ್ತು ಸಹಸ್ರ ದೆಬೆನ್ ಬಂಗಾರ!" ಗರ್ಭಗುಡಿಯ ಹೊರಗಿದ್ದ ಅಮಾತ್ಯ ಬೆಚ್ಚಿಬಿದ್ದ. ಅಷ್ಟು ಬಂಗಾರ ಕೊಟ್ಟರೆ ರಾಜಬೊಕ್ಕಸದ ಗತಿಯೇನು? ಹೆಖ್ವೆಟ್ ನಸುನಕ್ಕ, ಜನ ಸಮುದಾಯಕ್ಕಾದರೋ ಅಷ್ಟೊಂದು ಬಂಗಾರದ ಮೌಲ್ಯ ಊಹೆಗೆ ನಿಲುಕದ್ದು. ದಾಸದಾಸಿಯರನ್ನಾದರೆ ನೂರಾಗಿ, ಹತ್ತು ನೂರಾಗಿ, ಹತ್ತುನೂರು ನೂರಾಗಿ ಅವರಲ್ಲಿ ಹೆಚ್ಚಿನವರು ಕಲ್ಪಿಸಿಕೊಳ್ಳಬಲ್ಲರು. ಅಚ್ಚರಿಯ, ಮೆಚ್ಚುಗೆಯ ಗುಸುಗುಸು. ಯಾರೋ ಜಯಕಾರ ಮಾಡಿದರು: