ಪುಟ:Mrutyunjaya.pdf/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೦ ಮೃತ್ಯುಂಜಯ

ಭೇಟಿ ಮಾಡಿದ್ಮೇಲೆ ಇಲ್ಲಿಗೆ ವಾಪಸಾಗ್ತೇನೆ. ಅಷ್ಟರವರೆಗೆ ನೀವೆಲ್ಲ ಇಲ್ಲಿಯೇ ಇರಿ." ಅಂಬಿಗರಿಗೆ ಕಾತರ. ಆಬ್ಟು ತಂಡದವರಿಗೂ. ಏನರ್ಥ ಇವರ ಮಾತು ಕತೆಗೆ? ರಾಜಧಾನಿಯ ವ್ಯವಹಾರ ನೀತಿಗಳನ್ನು ಈಗ ಸಾಕಷ್ಟು ಬಲ್ಲ ಅಂಬಿಗರಿಗೆ ಅನಿಸಿತು-ಆಗಬಾರದ್ದು ಏನೋ ಆಗಿದೆ..... ಮೆನ್ನನೊಂದಿಗೆ ಬಟಾ ಅವರ ಬಳಿ ಸಾರಿದ. ಎಲ್ಲರೂ ಮರಳಿನ ಮೇಲೆ ಕುಳಿತರು. ತಾನೂ ಕುಳಿತು, ಬಾಧಿಸತೊಡಗಿದ ನಡುಕವನ್ನು ಓಡಿಸಲೆಂದು ಅವುಡುಗಚ್ಚಿ, ಕಡಿಕಡಿದು ಬಂದ ಪದಗಳಲ್ಲಿ ಬಟಾ ನುಡಿದ : “ನಮ್ಮ-ನಾಯಕರನ್ನೂ-ಔಟ-ಬೆಕ್‍ರನ್ನೂ- ಹಿಡಿದಿಟ್ಟಿದ್ದಾರೆ." ಬಟಾ ಬಂದು ಹತ್ತಿರ ಬಂದಾಗ ನೆಲೆಸಿತ್ತು ಮೌನ. ಆತ ಮಾತನಾಡಿದ ಮೇಲೆ, ಅದು ಗಾಢವಾಯಿತು. ಎಲ್ಲರೂ ಬಟಾನ ಕಡೆ ನೋಡಿದರು. ಮಾತೇನಾದರೂ ಇದ್ದರೆ ಅದು ಅವನಿಂದ ಬರಬೇಕು. ತಾಯಿ ಕೊಟ್ಟಿದ್ದ ರೊಟ್ಟಿ ತುಣುಕನ್ನು ಮೆಲ್ಲುತ್ತ ಮರಳಿನ ಮೇಲೆ ಕುಳಿತಿದ್ದ ಅಹೂರಾಳ ಮಗು ಇದೇನು ಮೌನ ಎಂದು ದೊಡ್ಡವರನ್ನೆಲ್ಲ ಒಮ್ಮೆ ನೋಡಿತು. ಬಳಿಕ ಹೆತ್ತವಳತ್ತ ತಿರುಗಿ, “ಅಮ್ಮಾ, ಅಮ್ಮಾ,” ಎಂದಿತು ಬರಿಯ ಅಂಗೈಗಳನ್ನು ತೋರಿಸುತ್ತ. ತಾಯಿ ಮಗಳನ್ನು ಎತ್ತಿಕೊಂಡಳು;"ಸುಮ್ನಿರು" ಎಂದಳು,ಮೆಲ್ಲನೆ. ಮೇಲಕ್ಕೆ ದೂರದಲ್ಲಿ ದೋಣಿ ಚಿಕ್ಕೆಗಳು ಕಾಣಿಸಿದುವು. ಮೆನ್ನ ಇಳಿದನಿಯ ಎಚ್ಚರಿಕೆ ನೀಡಿದ : “ಜನ ಇನ್ನೂ ಬರ್‍ತಿದ್ದಾರೆ.” "ನಾವು ಹಿಂದಿಕ್ಕಿ ಬಂದವರೇ. ಆದರೂ ನಾವು ಇಲ್ಲಿಂದ ಹೊರಟು,ಬೇರೇಯೇ ಇರೋದು ಮೇಲು,"ಎಂದ ಬಟಾ. ಅಹೂರಾ ಅಂದಳು : "ಹೇಳು, ಅಣ್ಣ, ಏನು ಮಾಡೋಣ ಈಗ ?" ಬಂಧಿತರನ್ನು ಮುಕ್ತಗೊಳಿಸಿ ರಾತ್ರಿಯೇ ಊರಿಗೆ ಮರಳಬೇಕು-ರಹಸ್ಯವಾಗಿ. ಅಂಬಿಗರು ನಾಲ್ವರೂ ದೊಣಿಯನ್ನು ಕಾಯುತ್ತ ಇಲ್ಲಿರಲಿ. ಒಂದೈದು ಜನ ನನ್ನ ಜತೆ ಬರಬೇಕು. ಯಾರು ? ಪ್ರಾಣ ತೆರಬೇಕಾದೀತು.