ಪುಟ:Mrutyunjaya.pdf/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೫೧೨ ಮ್ರುತ್ಯುಂಜಯ

        ಬಾಗಿಲಿನ ಕಾವಲು ಭಟರಲ್ಲೊಬ್ಬ, “ಬಂದ್ರಪ್ಪ ಹುಚ್ಚಯ್ಯನವರು,” ಎಂದ. ದಾಸಿಯರ ಸಂದಣಿಯ ಮೇಲೆ ದೃಷ್ಟಿ ನೆಟ್ಟದ್ದ ಇನ್ನೊಬ್ಬ ಭಟ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಮೆನ್ನ ಒಳಕ್ಕೆ ನಡೆದು, ನೇರವಾಗಿ ಪವಿತ್ರ ಕೊಳಕ್ಕೆ ಹೋದ. ಮಿಂದ. ಒದ್ದೆಯುಟ್ಟುಕೊಂಡ. ಮಂದಿರದಲ್ಲಿ ದೀಪಗಳು ಢಾಳಾಗಿ ಉರಿಯುತ್ತಿದ್ದುವು. ದೇವಸೇವಕರು ಯಾರೂ ಇರಲಿಲ್ಲ. ಮುದ್ರೆಯೊತ್ತಿದ್ದ ಗರ್ಭಗುಡಿಯ ಬಾಗಿಲಿನೆದುರು, ಹೂ ಹಣ್ಣುಗಳು ಹೇರಳವಾಗಿ ಬಿದ್ದಿದ್ದುವು. ಬದಿಗೆ ಸಾಗಿ ಮಂದಿರದ ಚಿಲ್ಲರೆ ಸಾಮಾನುಗಳ ಉಗ್ರಾಣದಿಂದ ಜೊಂಡಿನ ಹೆಣೆದ ತಟ್ಟೆಯನ್ನು ತಂದು ಅದರಲ್ಲಿ ಬೇರೆ ಬೇರೆ ಹೂವುಗಳನ್ನೂ ಅಂಜೂರ ಖರ್ಜೂರಗಳನ್ನೂ ಓರಣವಾಗಿ ಜೋಡಿಸಿದ. ತಟ್ಟೆಯ ನ್ನೆತ್ತಿಕೊಂಡು ಬಳಸು ದಾರಿ ಹಿಡಿದು ಕಾರಾಗೃಹದತ್ತ ನಡೆದ. 
         ಸಂದಿಯಲ್ಲೆಲ್ಲಿಂದಲ್ಲೋ “ಅಯ್ಯ” ಎಂಬ ಪಿಸುದನಿ ಕೇಳಿಸಿತು. ಶೀಬಾ. ಮೆನ್ನ ನಿಂತ. ಶೀಬಾ ಸರಸರನೆ ಬಂದು, "ಅವರು ಬಂದರಾ ?” ಎಂದು ಕೇಳಿದಳು. “ಹೂಂ" ಎಂದ ಮೆನ್ನ. ಆತನ ತಟ್ಟೆಯಲ್ಲಿದ್ದ ಹೂಗಳನ್ನು ಸರಿಸಿ, ತನ್ನ ನಡುವಸ್ತ್ರದ ಮಡಿಯಲ್ಲಿದ್ದ ಎರಡು ರೊಟ್ಟಿ ತೆಗೆದು ಅದರ ನಡುವಿನಲ್ಲಿಟ್ಟಳು. ಅವನ್ನು ಹೂ ಹಣ್ಣಗಳಿಂದ ಮುಚ್ಚಿ, "ಮತ್ತೆ ಸಿಗ್ತೇನೆ,” ಎಂದು ಹೇಳಿ ಕತ್ತಲಲ್ಲಿ ಕರಗಿ ಹೋದಳು.
        ಮೆನ್ನ ಉಲ್ಲಸಿತನಾದ. “ಜಗದ್ರಕ್ಷಕ ಪ್ಟಾ, ಸರ್ವಜನಪೂಜಿತ ಪ್ಟಾ,” ಎಂದು ಸ್ತೋತ್ರ ಪಠಿಸುತ್ತ ಮುಂದುವರಿದ. ಕತ್ತಲಲ್ಲಿ ಆ ಕಡೆ ಈ ಕಡೆ ಇದ್ದ ಅರಮನೆ ಪರಿಚಾರಕರು ದೇವಸೇವಕರು ಬಂದರೆಂದು ದಾರಿ ಬಿಟ್ಟರು.
        ಮೆನ್ನ ಯಾವ ಅಳುಕೂ ಇಲ್ಲದೆ ನೆಲಮಾಳಿಗೆಯ ಹೊರಬಾಗಿಲನ್ನು ಸಮೀಪಿಸಿದ. ಸ್ತೋತ್ರ ತಮ್ಮೆಡೆಗೆ ಬಂತೆಂದು ಕಾವಲು ಯೋಧರಿಗೆ ಅಚ್ಚರಿ.
        ಅವರೆದುರು ನಿಂತು ಮೆನ್ನ ಅಂದ :
        "ಪೆರೋನ ಆಯುರಾರೋಗ್ಯ ವರ್ಧಿಸಲಿ ! ಮಹಾ ಅರ್ಚಕರು ಕೈದಿಗೆ ಮಂದಿರದ ಪ್ರಸಾದ ಕಳಿಸಿದ್ದಾರೆ.”