ಪುಟ:Mrutyunjaya.pdf/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೫೪೦ ಮೃತ್ಯುಜಯ

ತಲೆ ಹೋದಾತು, ತಲೆ !” ಹಾಗೆ ಹೇಳುತ್ತ ತನ್ನ ಎಡ ಅಂಗೈಯನ್ನು ಕೊರಳಿಗೆ ಅಡ್ಡವಾಗಿ ರಭಸದಿಂದ ತಂದು, 'ಕ್ಲಕ್' ಎಂಬ ಸಪ್ಪಳವನ್ನೂ ಆತ ಮಾಡಿದ. ಏರುದನಿಯಲ್ಲಿ ಅವನು ಮುಂದುವರಿದ : "ಜನರಿಗೂ ಬುದ್ಧಿ ಇಲ್ಲ. ಕುರಿಗಳ ಹಾಗೆ ನುಗ್ತಾರೆ. ಕಟ್ಟುನಿಟ್ಟಾಗಿ ನೂರು ಜನರನ್ನು ಮಾತ್ರ ಒಳಗ್ಬಿಡಿ. ನೂರೇ ಜನ. ಉಳಿದವರೆಲ್ಲ ನ್ಯಾಯ ಮೂರ್ತಿ ತೀರ್ಪು ಕೊಟ್ಟಾದ ಮೇಲೆ ಬಂದು ನೋಡಿ ಹೋಗ್ಲಿ.” ಯೋಧನೊಬ್ಬ ಒಳಕ್ಕೆ ಧಾವಿಸಿ, “ಅಮಾತ್ಯರ ಪಲ್ಲಕ್ಕಿ," ಎಂದು ತಿಳಿಸಿದ. ದಳಪತಿ ಅತ್ತ ಓಡಿದ. ಅಮಾತ್ಯ ತನ್ನ ನಿವಾಸದಿಂದ ಹೊರಟ ಸುದ್ದಿಯಾಗಲೇ ದೇವಮಂದಿರಕ್ಕೂ ತಲಪಿತ್ತು. ನ್ಯಾಯಸ್ಥಾನ ಮತ್ತೆ ಸೇರುತ್ತದೆ ಎಂಬುದನ್ನು ಅರಮನೆಯ ವಿಸ್ತರಣಕ್ಕೆ ಕಂಚಿನ ಜಾಗಟೆ ಸಾರಿತು. ಪೆರೋಗೆ ಆಯುರಾರೋಗ್ಯ ಕೋರಿ ನ್ಯಾಯಮೂರ್ತಿ ಆಸೀನನಾದೊಡನೆಯೇ, ಪ್ರತಿಷ್ಠಿತರು ಅವಸರ ಅವಸರವಾಗಿ, ಒಬ್ಬರ ಹಿಂದೊಬ್ಬರು, ಒಳಕ್ಕೆ ಬಂದರು. ಆಮೆರಬ್ ಅಪ್ಪಿತಪ್ಪಿಯೂ ಕಟಾಂಜನದತ್ತ ದೃಷ್ಟಿ ಹರಿಸಲಿಲ್ಲ. ಮೆನೆಪ್‍ಟಾ ಮಾತ್ರ ಎದೆ ಅಗಲಿಸಿ ನಿಂತು ಅಮಾತ್ಯನನ್ನೇ ದಿಟ್ಟಿಸಿದ. ಅವನಿಗೆ 'ನಿಮ್ಮ ಕಷ್ಟ ನೋಡಲಾರೆ ಅಮಾತ್ಯವರ್ಯ' ಎಂದು ಗಟ್ಟಿಯಾಗಿ ಕೂಗಿ ಹೇಳಬೇಕೆನಿಸಿತು. ಮರು ಕ್ಷಣವೆ, ಅಂಥ ವಿಚಾರ ಮೂಡಿತಲ್ಲ-ಎಂದು ನಗು ಬಂತು. ಎಲ್ಲ ಪೂರ್ವಾಹ್ನದಂತೆಯೇ ಅಲ್ಲಿ ಅವರು. ಇಲ್ಲಿ ಇವರು. ಪ್ರತಿಯೊಂದು...ಊಹೂಂ ಹಾಗೆ ಖಚಿತವಾಗಿ ಹೇಳುವಂತಿಲ್ಲ. ಒಂದು ಸಣ್ಣ ವ್ಯತ್ಯಾಸ. ಸಣ್ಣದೊ ? ದೊಡ್ಡದೊ ? ಏನು ಅಂದರೆ- ಮೊದಲು ಮಹಾ ಅರ್ಚಕ ಮತ್ತು ಪರಿವಾರದ ಆಗಮನ. ಬಳಿಕ ಪೆರೋ ಮತ್ತು ಬಳಗ. ಮೊದಲಾದರೇನು ? ಅನಂತರವಾದರೇನು ? ಈಗ ಇವರೆಲ್ಲ ಒಂದೇ. ಏಕೆ ಧ್ಯೇಯದಿಂದ ಪ್ರೇರಿತರು ; ಸಮಾನಧರ್ಮದಿಂದ ಬಂಧಿತರು, ('ಅವರು ಆಟಗಾರರು, ಕುಳಿತಿದ್ದಾರೆ. ಇನ್ನು ಕಾಯಿಯ ಸರದಿ')