ಪುಟ:Mrutyunjaya.pdf/೫೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೫೫೫

" ಅವರಿಬ್ಬರು__ಔಟ, ಬೆಕ್....."
ಕ್ಷಣಮೌನದ ಬಳಿಕ ಆತ :
" ಸೇವಕರನ್ನು ಯಾರೂ ಕೊಲ್ಲೋದಿಲ್ಲ.”
"ನಿನ್ನ ಗೆಳೆಯರಿಗೆ ಹೇಳು. ಅವರಿಬ್ಬರು ದೊಡ್ಡಿಮನೆಗೆ ಬಂದದ್ದನ್ನು
ಲೆಕ್ಕ ಇಟ್ಟಿಲ್ಲ. ಬಿಡಿಸಿ ಇಲ್ಲಿಗೆ ಕಳಿಸು. ನಾನು ಹೊರಗೆ ದಾಟಿಸ್ತೇನೆ.”
“ ಹ್ಞ . ಶೀಬಾ.”
ಅಳು ಇಲ್ಲ, ಮಾತು ಮಾತ್ರ ಎಂದು ಮಗು ಮೊಲೆ ಚೀಪಿತು. ಹಾಲು
ಬಂತು. ಕುಡಿಯಿತು......
...ಶೀಬಾಳ ಗಂಡ ಮಿತ್ರರಿಗೆ ತೀರ್ಪಿನ ಸುದ್ದಿ ತಿಳಿಸಿ, ನುಡಿದ:
“ ಇವರ ಊರಿಂದ ಜನ ಬಂದಿದ್ದಾರೆ. ಹೋಗಲಿ, ಬಿಡು.”
“ ಪಾಪ! ಆದರೆ ನಾಳೆ ಗಲಾಟೆ, ಗಿಲಾಟೆ....”
" ಒಂದೂ ಇಲ್ಲ. ಎಲ್ಲ ಭಾರೀ ಖುಷೀಲಿದ್ದಾರೆ. ಇವರ ನೆನಪು
ಯಾರಿಗಿರ್ತದೆ? ಇವರನ್ನು ಬಿಟ್ಟುಬಿಡಬೇಕೂಂತ ತೀರ್ಪಾಯ್ತಂತೆ, ಯಾರೋ
ಹೇಳಿದ್ರು, ಅಂದರಾಯ್ತು.”
" ಕರಕೊಂಡು ಹೋಗು. ಇಲ್ಲಿ ಬಾಗಿಲೆಳೆದುಕೊಂಡು ನಾವೂ ಬಯ
ಲಿಗೆ ಬಂದ್ಬಿಡ್ತೇವೆ."
ಆ ದಿನ ವಿಚಾರಣೆ ಎಂಬುದನ್ನೂ ಬಟಾ ಬಂದುದನ್ನೂ ಪೂರ್ವಾಹ್ನವೇ
ಔಟ ಮತ್ತು ಬೆಕ್ ಅರಿತಿದ್ದರು. ದ್ವಾರಪಾಲಕ ಬಾಗಿಲು ತೆರೆದು “ ಇವನ
ಹಿಂದೆ ಹೋಗಿ ಎಂದಾಗ, 'ವಿಚಾರಣೆ ಮುಗಿಯಿತು; ನಮ್ಮೆಲ್ಲರ ಬಿಡುಗಡೆ
ಯಾಗಿದೆ,' ಎಂದುಕೊಂಡರು.
ಅಪರಿಚಿತ ಯೋಧನ ಹಿಂದೆ ನಡೆದು ಅವರು ಹೊಕ್ಕಿದ್ದು ಹಟ್ಟಿಯನ್ನು.
ಸಾಕಷ್ಟು ಹಾಲುಂಡು ತೃಪ್ತವಾಗಿದ್ದ ಮಗವನ್ನೆತ್ತಿಕೊಂಡು ಶೀಬಾ
ಅಲ್ಲಿ ನಿಂತಿದ್ದಳು. ಬೆಕ್ ಅವಳನ್ನು ನೋಡಿ ಹರ್ಷಿತನಾಗಿ "ತಂಗೀ" ಎಂದು
ಉದ್ಗರಿಸಿದ.
" ನಾನು ಹೊರಟೆ! " ಎಂದ, ಯೋಧ.
“ ನನ್ನ ಗಂಡ,” ಎಂದಳು ಶೀಬಾ, ಬೆಕ್ ಔಟರ ಕುತೂಹಲದ
ನೋಟಕ್ಕೆ ಉತ್ತರವಾಗಿ, (ಮನಸ್ಸಿನಲ್ಲಿ : “ಇವರಿಗೆ ಗೊತ್ತಾಗಿಲ್ಲ ಇನ್ನೂ.')