ಪುಟ:Mrutyunjaya.pdf/೬೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೩೦

ಮೃತ್ಯುಂಜಯ

“ ನಮ್ಮ ಮೆನೆಪ್ಟಾನೂ ಒಸೈರಿಸ್ ದೇವನೇ ಅಲ್ಲವೇ ?” ಎಂದ
ಸ್ನೊಫ್ರು. ತುಸು ಗಟ್ಟಿಯಾದ ಸ್ವರದಲ್ಲಿ ನೆಫಿಸ್ ನುಡಿದಳು :
“ನನ್ನ ದೇವರನ್ನು ನಾನು ಮುಟ್ಟೇನೆ. ”
ಕುಳಿತಲ್ಲಿಂದಲೇ ಅವಳು ತುಸು ಮುಂದಕ್ಕೆ ಸರಿದಳು, ಹಣೆ, ಕಣ್ಣು,
ಮೂಗು, ತುಟಿಗಳನ್ನು, ಕಿವಿ ಭಾಗವನ್ನು ಸವರಿದಳು. ಕತ್ತನ್ನು ಮತ್ತೆ ಮತ್ತೆ
ಮುಟ್ಟಿದಳು. ಬಸಿರು ಅಡ್ಡವಾಗುತ್ತಿದ್ದರೂ, ಶ್ರಮಪಟ್ಟು ತನ್ನ ತಲೆಯನ್ನು
ವಕ್ಷಸ್ಥಲದ ಮೇಲೆ ಕ್ಷಣಕಾಲ ಇರಿಸಿದಳು. ಹಾಗೆಯೇ ಕೆಳಕ್ಕೆ ಸರಿದು, ಕಟ
ಭಾಗದ ಕೆಳಗಡೆ ಹಣೆಯನ್ನಿಟ್ಟಳು. ಮತ್ತೆ ತಲೆ ಎತ್ತಿ, ಇನ್ನೂ ಕೊಂಚ
ಕೆಳಕ್ಕೆ ಜರಗಿ ತೊಡೆ ಮೊಣಕಾಲು, ಪಾದಗಳವರೆಗೂ ಅಂಗೈಗಳಿಂದ ತಡವಿ
ದಳು ಆಯಾಸಗೊಂಡ ಬಿಸಿಯುಸಿರು ಬಿಡುತ್ತ “ ಅಯ್ಯೋ ! ” ಎಂದಳು.
ಸೊ ಸ್ನೊಫ್ರು ನಿಧಾನವಾಗಿ ಪದಗಳನ್ನು ಬಿಡಿಬಿಡಿಸಿ ಹೇಳಿದ :
“ ನೆಫಿಸ್ ತಾಯಿ, ಇಡೀ ಬುಡಕಟ್ಟಿನ ಜನ ಸಮುದಾಯ ಹುತಾತ್ಮನ
ಹೆಂಡತಿ ಅಂತ ನಿನ್ನನ್ನು ಈ ದಿನ ಗೌರವಿಸಿದೆ. ”
ನೆಫಿಸಳ ಗಂಟಲಿನಿಂದ ಪದಗಳು ದಾರಿ ಬಿಡಿಸಿಕೊಂಡು ಹೊರಬಂದುವು :
“ನೀವೆಲ್ಲ ಅವನನ್ನು ನಾಯಕನಾಗಿ ಮಾಡಿದಿರಿ. ಅವನು ದೊಡ್ಡವ
ನಾದ. ನನ್ನಿಂದ ದೂರ ಎತ್ತರಕ್ಕೆ ಹೋದ. ಒಸೈರಿಸ್ ದೇವನಾದ.
ತಟ್ಟಿದ ಬಿಸಿರೊಟ್ಟಿ, ಒಣಗಿದ ಮಾವಿನ ಉಪ್ಪೇರಿ, ಇಷ್ಟನ್ನೇ ಆತ ನನ್ನಿಂದ
ಬಯಸಿದ್ದು, ಅದು ಮಾಡು, ಇದು ಮಾಡು ಅಂತ ಯಾವತ್ತೂ ಹೇಳಿದ
ವನಲ್ಲ, ಹೊಡೆದವನಲ್ಲ, ಬಡೆದವನಲ್ಲ, ರಾಜಧಾನಿಯಿಂದ ಆಮಂತ್ರಣ
ಬಂದಾಗ ನನಗೆ ದಿಗಲಾಯಿತು, ಅಲ್ಲಿ ಅಪಾಯ ಇರಬಹುದು; ಹುಷಾರಾ
ಗಿರು '__ಎಂದೆ ಹೂಂ ಅಂದ. ಚಿಕ್ಕಮ್ಮನ ಹಳ್ಳಿಗೆ ಹೋಗಿ ಬರೋ ಒಂದು
ಆಸೆ ಹಾಗೆಯೇ ಉಳಿದಿತ್ತು. 'ವಾಪಸಾದ್ಮೇಲೆ, ಕುಯಿಲು ಮುಗಿಸಿ, ಹೋಗಿ
ಬರೋಣ' ಅಂದ. ಇಲ್ಲಿಂದ ಹೊರಡೋ ಹಿಂದಿನ ರಾತ್ರೆ ಸುಮ್ಮನೆ
ಮಾತಾಡ್ತಾ ಮಲಗಿದ್ವಿ. ಇವತ್ತು ನಿನ್ನ ತೋಳೇ ನನಗೆ ದಿಂಬು, ಪ್ಟಾ
....ಕಣ್ಣೀರಿಂದ ತೋಯಿಸೋದಿಲ್ಲ. ಜೊಲ್ಲು ಸುರಿಸಿ ಒದ್ದೆ ಮಾಡ್ತನೆ'_ ಅಂತ
ನಾನಂದೆ....ನನ್ನ ಗಂಡನನ್ನು ರಕ್ಷಿಸದೆ ಹೋದೆಯಲ್ಲ ಐಸಿಸ್. ಮಹಾದೇವ
ಪ್ಟಾನೂ ನನ್ನ ಕೈ ಬಿಟ್ಟನಲ್ಲ...ಅಯ್ಯೋ ! ”