ಪುಟ:Mrutyunjaya.pdf/೬೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೩೫

“ಹೂಂ, ”
....ಆ ಬೆಳಿಗ್ಗೆ ಅಸೆಟ್ ನನ್ನು ಎಬ್ಬಿಸಿದ ಅವನ ಹೆಂಡತಿ, “ದೋಣಿ
ಕಟ್ಟೆಯಿಂದ ಏನೋ ಗಜಿಬಿಜಿ ಕೇಳಿಬರಿದೆ.” ಎಂದಳು.
ರಾಜಧಾನಿಯಲ್ಲಿ ಮೆನೆಪ್ಟಾಗೆ ಬುದ್ದಿ ಕಲಿಸ್ತಾರೆ ಎಂದು ಅಸೆಟ್‌ನ
ಒಳದನಿ ಹೇಳಿತ್ತು. ಆ ರೀತಿ ಆಗಲಿ ದೇವರೇ ಎಂದು ಅವನು ಪ್ರಾರ್ಥಿಸಿದ್ದ.
ಚಾಪೆಯಿಂದ ಗಡಬಡಿಸಿ ಏಳು, ದೋಣಿಕಟ್ಟೆಯಿಂದ ಗಜಿಬಿಜಿ ಎಂದರೆ,
ಈ ನಾಯಕ ವಾಪಸು ಬಂದೇ ಬಿಟ್ಟನೋ ಕಡೆಗೂ __ಎಂದು ಗೊಣಗಿದ.
ಕೊಳದಲ್ಲಿ ಮುಳುಗಿ ಎದ್ದಾಗ, ವಿಶೇಷ ಚಟುವಟಿಕೆಯೇನೂ ಕೆಳಗೆ
ಊರಲ್ಲಿ ಇದ್ದಂತೆ ತೋರಿಬರಲಿಲ್ಲ. ಆದರೆ ಇನ್ನೂ ಬೆಳಕು ಸರಿಯಾಗಿ ಹರಿದಿರ
ಲಿಲ್ಲವಲ್ಲ ? ಮಗನನ್ನು ಎಬ್ಬಿಸಿ, “ಕಟ್ಟೆಯವರೆಗೆ ಹೋಗಿ ಬಾ, ”ಎಂದು
ಪ್‌ಟಾ ಮೂರ್ತಿಗೆ ನಿಧಾನವಾಗಿ ಅಭ್ಯಂಜನ ಮಾಡಿಸಿ ಮಡಿ ಉಡಿಸಿ
ಸ್ತೋತ್ರ ಆರಂಭಿಸುವ ಹೊತ್ತಿಗೆ ಏದುಸಿರು ಬಿಡುತ್ತ ಹುಡುಗ ಬಂದ, ತನ್ನ
ವರದಿಯೊಡನೆ.
ಅಪೆಟ್ ಮಂತ್ರಪಠಣವನ್ನು ಬಿಟ್ಟು ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಿದ.
ಆಶ್ಚರ್ಯ ! ಮಹದಾಶ್ಚರ್ಯ! ಹೇಗೆ ಸತ್ತ? ಮೆದುಳು ಸಿಡಿಯಿತೊ ?
ಗುಂಡಿಗೆ ಬಿರಿಯಿತೊ ? ಮರಣ ದಂಡನೆಯೆ? ಶವಲೇಪನ ಆಗಿರುವುದಂತೂ
ಅದ್ಭುತವೇ ! ಪ್ರಾಂತಪಾಲನನ್ನು ಓಡಿಸಿ ಗದ್ದುಗೆ ಏರಿದವನು ಪೆರೋನೇ ಆದ
ನಲ್ಲ ! ತಾನು ಊರೊಳಕ್ಕೆ ಹೋದರೆ ವಿಷಯ ತಿಳೀತದೆ. ಹೇಗೂ ಅಂತ್ಯ
ಕ್ರಿಯೆಗಾಗಿ ಕರೆಯಲು ಬತ್ತಾರೆ. ಅನ್ನುವಿಗೆ ಮಾಡಿದ ಹಾಗೆ ಇವನಿಗೂ
'ಬೆಳಕಿಗೆ ಆಗಮನ' ಪುಸ್ತಕ ಓದಬೇಕೇನೊ ? ತಾನು ಇಲ್ಲಿ ತಾಳ್ಮೆಯಿಂದಿದ್ದು
ಅವರ ದಾರಿ ನೋಡುವುದೇ ಮೇಲು.
ಪೂಜೆ ಮುಂದುವರಿಯಿತು, ಹೆಚ್ಚು ಉತ್ಸಾಹದಿಂದ,
ಮೆರವಣಿಗೆ; ಮೆನೆಪ್ ಟಾನ ಮನೆಯ ಮುಂದೆಯೇ ಇರಬೇಕು.__ ಅದು
ನಿಂತುದು, ರಾಜಗೃಹಕ್ಕೆ ಮುಂದುವರಿದುದು ಕಂಡಿತು.... ಬಿಸಿಲು ಹೆಚ್ಚಿತು.
'ಯಾರೂ ಬರಲಿಲ್ಲವಲ್ಲ. ಗೋರಿಪ್ರದೇಶದ ಕಡೆ ಯಾರೂ ಹೋದಂತಿಲ್ಲ.
ಏನಾಗುತ್ತಿದೆ ಎಂದು ತಿಳಿದು ಬರಲು ಮತ್ತೆ ಮಗನನ್ನು ಪುನಃ ಕಳುಹಿಸಲೆ ?'